ADVERTISEMENT

ಎಟಿಎಂ ಏಜೆನ್ಸಿ ವಾಹನ ದರೋಡೆ : ಸಿಬ್ಬಂದಿ ಸೇರಿ ಐವರ ಸೆರೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST

ಬೆಂಗಳೂರು: ಎಟಿಎಂ ಘಟಕಗಳಿಗೆ ಹಣ ತುಂಬುವ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ಹಣ ದರೋಡೆ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ನಗರದ ಆಗ್ನೇಯ ವಿಭಾಗದ ಪೊಲೀಸರು ಆ ಏಜೆನ್ಸಿಯ ನೌಕರರು ಸೇರಿದಂತೆ ಐವರನ್ನು ಬಂಧಿಸಿ ರೂ 55 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಕೊಡಿಗೇಹಳ್ಳಿಯ ಅಜಿತ್ (24), ದೇವಸಂದ್ರದ ಮಂಜುನಾಥ್ (21), ನಾಗರಾಜ್ (35), ಹೂಡಿಯ ಅರ್ಥೇಶ್ (22) ಮತ್ತು ಯಲಹಂಕ ಉಪನಗರ ಬಳಿಯ ತಿರುಮಲಪುರದ ಜಗದೀಶ್ (35) ಬಂಧಿತರು.

`ಆರೋಪಿಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಘಟಕಗಳಿಗೆ ಹಣ ತುಂಬುವ ಸೇವೆ ಒದಗಿಸುವ ಪ್ರೀಮಿಯರ್ ಶೀಲ್ಡ್ ಪ್ರೈವೇಟ್ ಲಿಮಿಟೆಡ್ ಏಜೆನ್ಸಿಗೆ ಸೇರಿದ ಹಣವನ್ನು ದರೋಡೆ ಮಾಡಿದ್ದರು. ಅಜಿತ್ ಆ ಏಜೆನ್ಸಿಯಲ್ಲಿ ಲೆಕ್ಕಿಗನಾಗಿದ್ದ. ಜಗದೀಶ್ ಏಜೆನ್ಸಿಯ ವಾಹನಕ್ಕೆ ಸೆಕ್ಯುರಿಟಿ ಗಾರ್ಡ್ ಆಗಿದ್ದ. ಮಂಜುನಾಥ್ ಬಿ.ಇ ಓದಿದ್ದಾನೆ ಮತ್ತು ಅರ್ಥೇಶ್ ಬಾರ್ ಒಂದರಲ್ಲಿ ನೌಕರನಾಗಿದ್ದ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಜಿತ್ ಮತ್ತು ಜಗದೀಶ್, ಇತರೆ ಆರೋಪಿಗಳ ಜತೆ ಸೇರಿ ದರೋಡೆಯ ಸಂಚು ರೂಪಿಸಿದ್ದರು. ಅವರು ಏಜೆನ್ಸಿಯ ಇತರೆ ನೌಕರರೊಂದಿಗೆ ಅ.4ರಂದು ಎಲೆಕ್ಟ್ರಾನಿಕ್‌ಸಿಟಿ, ಮಡಿವಾಳ ಮತ್ತಿತರ ಕಡೆ ಎಟಿಎಂ ಘಟಕಗಳಿಗೆ ಹಣ ತುಂಬಿದ್ದರು. ಬಳಿಕ ನೈಸ್ ರಸ್ತೆ ಮಾರ್ಗವಾಗಿ ಜಯನಗರದ ಎಟಿಎಂ ಘಟಕಕ್ಕೆ ಹಣ ತುಂಬಲು ಹೊರಟಿದ್ದರು.

ಅವರ ಸಹಚರರು ಪೂರ್ವಯೋಜಿತ ಸಂಚಿನಂತೆ ಕಾರು ಹಾಗೂ ಬೈಕ್‌ಗಳಲ್ಲಿ ಹಿಂಬಾಲಿಸಿ ಬಂದು, ನೈಸ್ ರಸ್ತೆಯಲ್ಲಿ ಏಜೆನ್ಸಿಯ ಕಾರನ್ನು ಅಡ್ಡಗಟ್ಟಿ ವಾಹನದ ಗಾಜುಗಳನ್ನು ಒಡೆದು ಹಾಕಿದ್ದರು. ಅಲ್ಲದೇ ಕಾರು ಚಾಲಕ ಕೇಶವ ಹಾಗೂ ಮತ್ತೊಬ್ಬ ಸೆಕ್ಯುರಿಟಿ ಗಾರ್ಡ್ ರೋಹಿತ್ ಕಣ್ಣಿಗೆ ಕಾರದ ಪುಡಿ ಎರಚಿ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, 65 ಲಕ್ಷ ಹಣವಿದ್ದ ಪೆಟ್ಟಿಗೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ನಂತರ ಅಜಿತ್ ಮತ್ತು ಜಗದೀಶ್ ಸಹಚರರ ಜತೆಯೇ ತಲೆಮರೆಸಿಕೊಂಡಿದ್ದರು.ಹಲ್ಲೆಗೊಳಗಾಗಿದ್ದ ಕೇಶವ, ರೋಹಿತ್ ಮತ್ತು ಏಜೆನ್ಸಿಯ ಇತರೆ ನೌಕರರು ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.