ADVERTISEMENT

ಎಟಿಎಂ ಗ್ರಾಹಕರನ್ನು ವಂಚಿಸಿ ಹಣ ಡ್ರಾ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಬೆಂಗಳೂರು: ಎಟಿಎಂ ಘಟಕಗಳಲ್ಲಿ ಗ್ರಾಹಕರನ್ನು ವಂಚಿಸಿ ಅವರ ಹಣವನ್ನು ಡ್ರಾ ಮಾಡಿಕೊಳ್ಳುತ್ತಿದ್ದ ಆರೋಪದ ಮೇಲೆ ಜಾರ್ಖಂಡ್ ಮೂಲದ ಮನೀಷ್‌ಕುಮಾರ್ ಸಿಂಗ್ (22) ಎಂಬಾತನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ಮನೀಷ್‌ಕುಮಾರ್‌ನ ತಂಗಿ ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಇ ಓದುತ್ತಿದ್ದಾರೆ. ಅವರಿಬ್ಬರೂ ಹೆಸರಘಟ್ಟ ರಸ್ತೆ ಸಮೀಪದ ಸಪ್ತಗಿರಿ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮನೀಷ್‌ಕುಮಾರ್ ಎಟಿಎಂ ಘಟಕಗಳಿಗೆ ಹೋಗಿ ಅಲ್ಲಿನ ಯಂತ್ರದ `ಎಂಟರ್~ ಕೀ ನಡುವೆ ಬೆಂಕಿ ಕಡ್ಡಿಯ ಚೂರನ್ನು ಇಟ್ಟು ಹೊರ ಬರುತ್ತಿದ್ದ.

ಆ ಘಟಕಗಳಿಗೆ ಬರುತ್ತಿದ್ದ ಗ್ರಾಹಕರು ಎಟಿಎಂ ಕಾರ್ಡ್ ಅನ್ನು ಯಂತ್ರಕ್ಕೆ ಸ್ವೈಪ್ ಮಾಡಿ, ರಹಸ್ಯ ಸಂಕೇತ ಮತ್ತು ಹಣದ ಮೊತ್ತವನ್ನು ನಮೂದಿಸುತ್ತಿದ್ದರು. ಕೊನೆಯ ಹಂತದಲ್ಲಿ `ಎಂಟರ್~ ಕೀ ಒತ್ತಲು ಯತ್ನಿಸಿದಾಗ ಅದು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದರಿಂದಾಗಿ ಹಣ ಡ್ರಾ ಮಾಡಲು ಸಾಧ್ಯವಾಗದೆ ಗ್ರಾಹಕರು ಎಟಿಎಂ ಘಟಕದಿಂದ ಹೊರ ಬರುತ್ತಿದ್ದರು. ಇದೇ ಸಂದರ್ಭದ ನಿರೀಕ್ಷೆಯಲ್ಲಿ ಇರುತ್ತಿದ್ದ ಮನೀಷ್‌ಕುಮಾರ್ ಕೂಡಲೇ ಎಟಿಎಂ ಘಟಕದ ಒಳ ಹೋಗಿ, `ಎಂಟರ್~ ಕೀ ಬಳಿ ಇಟ್ಟಿರುತ್ತಿದ್ದ ಬೆಂಕಿ ಕಡ್ಡಿಯನ್ನು ತೆಗೆದು ಹಣದ ಮೊತ್ತವನ್ನು ನಮೂದಿಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯು ಕೆ.ಜಿ.ರಸ್ತೆಯ ಕಾವೇರಿ ಭವನ ಕಟ್ಟಡದಲ್ಲಿರುವ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ 2011ರ ಡಿ. 27ರಂದು ಇಬ್ಬರು ಗ್ರಾಹಕರಿಗೆ ಇದೇ ರೀತಿ ವಂಚಿಸಿ ಹಣ ಡ್ರಾ ಮಾಡಿಕೊಂಡಿದ್ದ. ಅಲ್ಲದೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಕಾರ್ಯನಿರ್ವಾಹಕ ಎಂಜಿನಿಯರ್ ನಂದಿನಿ ಎಂಬುವರ ಖಾತೆಯಿಂದ 15 ಸಾವಿರ ಮತ್ತು ಕೆಪಿಟಿಸಿಎಲ್ ಉದ್ಯೋಗಿ ಲಕ್ಷ್ಮಣ್ ಎಂಬುವರ ಖಾತೆಯಿಂದ 10 ಸಾವಿರ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡಿದ್ದ. ಆರೋಪಿಯು ಎರಡು ತಾಸಿನ ಅಂತರದಲ್ಲಿ ಈ ಕೃತ್ಯ ಎಸಗಿದ್ದ.

ಈ ದೃಶ್ಯ ಎಟಿಎಂ ಘಟಕದಲ್ಲಿನ ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಂಚನೆಗೊಳಗಾಗಿದ್ದ ನಂದಿನಿ ಮತ್ತು ಲಕ್ಷ್ಮಣ್ ಅವರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿ ಬಿದ್ದ. ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿ ಮನೀಷ್‌ಕುಮಾರ್‌ನ ಬ್ಯಾಂಕ್ ಖಾತೆಯಲ್ಲಿದ್ದ ರೂ 6000 ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 66ರ ಅಡಿ ದೂರು ದಾಖಲಿಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಎಸ್‌ಐ ನಿರಂಜನ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.