ADVERTISEMENT

ಎಬಿವಿಪಿ, ಎನ್‌ಎಸ್‌ಯುಐ ಕಾರ್ಯಕರ್ತರ ಮಧ್ಯೆ ಘರ್ಷಣೆ

ಸಂಶೋಧನಾ ವಿದ್ಯಾರ್ಥಿ ವೇಮುಲ ಆತ್ಮಹತ್ಯೆಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 19:38 IST
Last Updated 21 ಜನವರಿ 2016, 19:38 IST
ಎಬಿವಿಪಿ, ಎನ್‌ಎಸ್‌ಯುಐ ಗುಂಪುಗಳನ್ನು ಸಮಾಧಾನ ಪಡೆಸಲು ಯತ್ನಿಸಿದ ಪೊಲೀಸರೊಂದಿಗೆ ಕಾರ್ಯಕರ್ತರು ವಾಗ್ವಾದ ನಡೆಸಿದರು.  ಪಿಟಿಐ ಚಿತ್ರ
ಎಬಿವಿಪಿ, ಎನ್‌ಎಸ್‌ಯುಐ ಗುಂಪುಗಳನ್ನು ಸಮಾಧಾನ ಪಡೆಸಲು ಯತ್ನಿಸಿದ ಪೊಲೀಸರೊಂದಿಗೆ ಕಾರ್ಯಕರ್ತರು ವಾಗ್ವಾದ ನಡೆಸಿದರು. ಪಿಟಿಐ ಚಿತ್ರ   

ಬೆಂಗಳೂರು: ಹೈದರಾಬಾದ್ ವಿ.ವಿ.ಯ ಸಂಶೋಧನಾ ವಿದ್ಯಾರ್ಥಿ ವೇಮುಲ ರೋಹಿತ್ ಆತ್ಮಹತ್ಯೆಗೆ ಎಬಿವಿಪಿ ಕಾರಣ ಎಂದು ಆರೋಪಿಸಿ, ಗುರುವಾರ ಎನ್‌ಎಸ್‌ಯುಐ ನಗರದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಮತ್ತು ಎಬಿವಿಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆಯಿತು.

ಘಟನೆಯಲ್ಲಿ ಎಬಿವಿಪಿ ಪ್ರಾಂತೀಯ ಕಾರ್ಯದರ್ಶಿ ಬಸವೇಶ್ ಅವರಿಗೆ ಗಾಯವಾಗಿದ್ದು,  ಕಚೇರಿಯ ಗಾಜುಗಳು ಒಡೆದಿವೆ. ಮಧ್ಯಾಹ್ನ 12.30ರ ಸುಮಾರಿಗೆ ಶೇಷಾದ್ರಿಪುರದಲ್ಲಿರುವ ಎಬಿವಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎನ್‌ಎಸ್‌ಯುಐ ಕಾರ್ಯಕರ್ತರು, ಕಚೇರಿಯ ಆವರಣವನ್ನು ಪ್ರವೇಶಿಸಲು ಮುಂದಾದರು. ಆಗ ಅವರನ್ನು ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಈ ವೇಳೆ ಸ್ಥಳದಲ್ಲಿದ್ದ ಎಬಿವಿಪಿ ಕಾರ್ಯಕರ್ತರು ಪ್ರತಿಭಟನಾಕಾರರಿಗೆ ಪ್ರತಿರೋಧ ತೋರಿದರು. ಹೀಗೆ ಇಬ್ಬರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

‘ಪ್ರತಿಭಟನಾಕಾರರು ಕಚೇರಿ ಒಳಗಡೆ ಪ್ರವೇಶಿಸಲು ಮುಂದಾದಾಗ, ನಾನೂ ಸೇರಿದಂತೆ ಕೆಲ ಕಾರ್ಯಕರ್ತರು ತಡೆಯಲು ಮುಂದಾದೆವು. ಆಗ ಇದ್ದಕ್ಕಿದ್ದಂತೆ ನಮ್ಮ ಮೇಲೆ ಕಲ್ಲು ತೂರಿದರು. ಅಲ್ಲದೆ, ನನ್ನನ್ನು ಎಳೆದಾಡಿ ಹಲ್ಲೆ ನಡೆಸಿದರು’ ಎಂದು ಬಸವೇಶ್ ಅವರು ‘ಪ್ರಜಾವಾಣಿ’ಗೆ ಹೇಳಿದರು.
‘ಸಂಶೋಧನಾ ವಿದ್ಯಾರ್ಥಿ ವೇಮುಲ ಆತ್ಮಹತ್ಯೆಗೂ ಎಬಿವಿಪಿಗೂ ಯಾವುದೇ ಸಂಬಂಧ ಇಲ್ಲ. ಆದರೂ, ಸಾವಿಗೆ ಸಂಘಟನೆಯೇ ಕಾರಣ ಎಂದು ಆರೋಪಿಸಿ, ಕಚೇರಿ ಎದುರು ಪ್ರತಿಭಟನೆ ಮಾಡಿದ್ದು ಎಷ್ಟು ಸರಿ?’ ಎಂದು ಅವರು ಪ್ರಶ್ನಿಸಿದರು.

ಅವರಿಂದಲೇ ಹಲ್ಲೆ: ‘ವೇಮುಲ ಅವರ ಆತ್ಮಹತ್ಯೆಗೆ ಎಬಿವಿಪಿ ಕಾರಣ ಎಂದು ಆರೋಪಿಸಿ, ವಿದ್ಯಾರ್ಥಿನಿಯರು ಸೇರಿದಂತೆ ಸುಮಾರು 60 ದಲಿತ ವಿದ್ಯಾರ್ಥಿಗಳು ಎಬಿವಿಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಎಬಿವಿಪಿಯರು ಪ್ರತಿಭಟನಾಕಾರರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ, ಕಲ್ಲು ತೂರಾಟ ನಡೆಸಿದರು’ ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಎಸ್‌.ಮಂಜುನಾಥ ಅವರು ತಿಳಿಸಿದರು. ‘ಆಗ ಸ್ಥಳದಲ್ಲಿದ್ದ ನಮ್ಮ ಕಾರ್ಯಕರ್ತರು ಅವರ ನೆರವಿಗೆ ಹೋಗಿದ್ದಾರಷ್ಟೆ. ನಮ್ಮ ವಿರುದ್ಧ ಸುಳ್ಳು ದೂರು ನೀಡಲಾಗಿದೆ’ ಎಂದು ಅವರು ದೂರಿದರು.

ಪ್ರಕರಣ ದಾಖಲು: ಘಟನೆ ಸಂಬಂಧ ಬಸವೇಶ್ ಅವರು ನೀಡಿದ ದೂರಿನ ಮೇರೆಗೆ,  ಪ್ರಕರಣ ದಾಖಲಿಸಿಕೊಂಡು ಎಂಟು ಪ್ರತಿಭಟನಾಕಾರರನ್ನು  ಬಂಧಿಸಲಾಗಿದೆ ಎಂದು ಶೇಷಾದ್ರಿಪುರ ಠಾಣೆ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.