ADVERTISEMENT

ಎರಡು ಜಿಲ್ಲೆಗಳಲ್ಲಿ ಸಬಲೀಕರಣ ಯೋಜನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:25 IST
Last Updated 14 ಸೆಪ್ಟೆಂಬರ್ 2011, 19:25 IST

ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿನ ಚುನಾಯಿತ ಮಹಿಳಾ ಸದಸ್ಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ  ವಿಶ್ವಸಂಸ್ಥೆಯ ಮಹಿಳಾ ಘಟಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಪ್ರಾಯೋಗಿಕವಾಗಿ ಮೈಸೂರು ಮತ್ತು ಧಾರವಾಡ ಜಿಲ್ಲೆಯಲ್ಲಿ ಈ ಯೋಜನೆ ಜಾರಿಗೆ ಬಂದಿದೆ.

ದಕ್ಷಿಣ ಏಷ್ಯಾ ಮತ್ತು ಭಾರತದಲ್ಲಿ ಮಹಿಳೆಯರ ರಾಜಕೀಯ ನಾಯಕತ್ವ ಮತ್ತು ಉತ್ತಮ ಆಡಳಿತಕ್ಕೆ ಉತ್ತೇಜನ ನೀಡುವ ಯೋಜನೆಯಡಿ ಈ ಕಾರ್ಯಕ್ರಮ ರೂಪಿಸಲಾಗಿದ್ದು, ರಾಜ್ಯದ ಎರಡು ಜಿಲ್ಲೆಗಳಲ್ಲಿ ಇದನ್ನು ಜಾರಿಗೊಳಿಸುವ ಸಂಬಂಧ ಬುಧವಾರ ಇಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್ ಮತ್ತು ವಿಶ್ವಸಂ್ಥಯ ಮಹಿಳಾ ಘಟಕದ ಪ್ರಾದೇಶಿಕ ಕಾರ್ಯಕ್ರಮ ನಿರ್ದೇಶಕಿ ಸುಷ್ಮಾ ಕಪೂರ್ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಷ್ಮಾ, ಬಾಂಗ್ಲಾದೇಶ, ಭೂತಾನ್, ನೇಪಾಳ, ಪಾಕಿಸ್ತಾನದಲ್ಲಿ ಸಬಲೀಕರಣ ಯೋಜನೆ ಜಾರಿಯಲ್ಲಿದೆ. ಅಲ್ಲದೆ ಭಾರತದ ಬಿಹಾರ, ಒಡಿಶಾ, ರಾಜಸ್ತಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಮಹಿಳೆಯರಲ್ಲಿ ನಾಯಕತ್ವದ ಗುಣ ಬೆಳೆಸಲು, ಲಿಂಗ ತಾರತಮ್ಯ ಹೋಗಲಾಡಿಸಲು ಇದು ಸಹಕಾರಿಯಾಗಲಿದೆ ಎಂದು  ಆಶಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಜಾರಿಗೊಳಿಸುತ್ತಿರುವ ಈ ಯೋಜನೆ ಯಶಸ್ವಿಯಾದರೆ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಮಹಿಳಾ ಸದಸ್ಯರಲ್ಲಿ ನಾಯಕತ್ವ ಗುಣ ಬೆಳೆಸಲು, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು, ನಿರ್ಧಾರ ತೆಗೆದುಕೊಳ್ಳಲು ಈ ಯೋಜನೆ ನೆರವಾಗಲಿದೆ ಎಂದು ಹೇಳಿದರು.

ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಮಹಿಳಾ ಸದಸ್ಯರು, ತಮ್ಮ ಗಂಡಂದಿರಿಗೂ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಗಲಾಟೆ ಮಾಡಿದ ಪ್ರಸಂಗ ಬೆಳಕಿಗೆ ಬಂದ ನಂತರ, ನೋಟಿಸ್ ನೀಡಿ ಜಿಲ್ಲಾ ಪಂಚಾಯಿತಿಯನ್ನು ಅಮಾನತುಗೊಳಿಸುವ ಎಚ್ಚರಿಕೆ ನೀಡಲಾಗಿತ್ತು. ಇದಾದ ನಂತರ ಎಲ್ಲಿಯೂ ಇಂತಹ ಪ್ರಕರಣಗಳು ನಡೆದಿಲ್ಲ ಎಂದರು.

ಮೈಸೂರಿನ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ತರಬೇತಿ ನೀಡಲಿದ್ದು 2013ರ ಮಾರ್ಚ್‌ವರೆಗೂ ಈ ಯೋಜನೆ ಜಾರಿಯಲ್ಲಿರುತ್ತದೆ. ಅಗತ್ಯಬಿದ್ದರೆ ವಿಸ್ತರಿಸಲು ಅವಕಾಶವಿದೆ. ಯೋಜನೆಗೆ 1.35 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಜಮಾಬಂದಿ, ಸಾಮಾಜಿಕ ಲೆಕ್ಕಪರಿಶೋಧನೆ, ಅಭಿವೃದ್ಧಿ ಯೋಜನೆಗಳ ರೂಪುರೇಷಗಳನ್ನು ಸಿದ್ಧಪಡಿಸುವುದು, ಮಾಸಿಕ ಸಭೆಗಳನ್ನು ನಡೆಸುವ ವಿಧಾನ, ಯೋಜನಾ ಸಮಿತಿಗಳು ಇತ್ಯಾದಿಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಗಣ್ಯರಿಗೆ ಹೂವಿನ ಹಾರ ಬದಲು ಪುಸ್ತಕ...
ಬೆಂಗಳೂರು: 
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಬರುವ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ಹಮ್ಮಿಕೊಳ್ಳುವ ಸಭೆ ಸಮಾರಂಭಗಳಲ್ಲಿ ಇನ್ನು ಮುಂದೆ ಗಣ್ಯರಿಗೆ ಹೂವಿನ ಹಾರ, ಹೂಗುಚ್ಛ ನೀಡಿ ಸ್ವಾಗತಿಸುವುದನ್ನು ಬಿಟ್ಟು ಪುಸ್ತಕ ಅಥವಾ ಸೌರ ದೀಪಗಳನ್ನು ನೀಡಿ ಗೌರವಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿದ್ದು, ನಾಡಿನ ಕಲೆ, ಸಂಸ್ಕೃತಿ, ವ್ಯಕ್ತಿತ್ವ ವಿಕಸನ, ಗ್ರಾಮೀಣ ಜನ ಜೀವನಕ್ಕೆ ಸಂಬಂಧಿಸಿದ, ವಿವಾದಕ್ಕೆ ಎಡೆಮಾಡಿಕೊಡದ ಕನ್ನಡ ಪುಸ್ತಕಗಳು ಅಥವಾ ಸೌರ ದೀಪಗಳನ್ನು ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಗಣ್ಯರು/ಅತಿ ಗಣ್ಯರಿಗೆ ನೀಡುವಂತೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ್  ತಿಳಿಸಿದರು.

 ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪುಸ್ತಕಗಳ ಪಟ್ಟಿಯನ್ನು ಪಡೆದುಕೊಂಡು ಸ್ಥಳೀಯ ಸಂಸ್ಥೆಗಳಿಗೆ ಕಳುಹಿಸಿಕೊಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.