ADVERTISEMENT

ಎಲ್ಲೋ ಫಲಕ, ಇನ್ನೆಲ್ಲೋ ದಂಡ!

ಸಿದ್ಧಲಿಂಗಯ್ಯ ವೃತ್ತದಲ್ಲಿ ಹೊಸದಾಗಿ ಫಲಕ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ವೃತ್ತದಿಂದ ದೂರದಲ್ಲಿ ಅಳವಡಿಸಿರುವ ಸೂಚನಾ ಫಲಕ
ವೃತ್ತದಿಂದ ದೂರದಲ್ಲಿ ಅಳವಡಿಸಿರುವ ಸೂಚನಾ ಫಲಕ   

ಬೆಂಗಳೂರು: ‘ಯು.ಬಿ.ಸಿಟಿ ಎದುರಿನ ಸಿದ್ಧಲಿಂಗಯ್ಯ ವೃತ್ತದಲ್ಲಿ ಸಂಚಾರ ನಿಯಮಗಳ ಸೂಚನಾ ಫಲಕಗಳನ್ನು ಅವೈಜ್ಞಾನಿಕವಾಗಿ ಅಳವಡಿಸಿರುವ ಪೊಲೀಸರು, ಚಾಲಕರ ದಿಕ್ಕುತಪ್ಪಿಸಿ ದಂಡ ವಸೂಲಿ ಮಾಡುತ್ತಿದ್ದಾರೆ’ ಎಂದು ವಾಹನ ಸವಾರರು ದೂರಿದ್ದಾರೆ.

ಕಸ್ತೂರಬಾ ರಸ್ತೆ ಹಾಗೂ ವಿಠ್ಠಲ ಮಲ್ಯ ರಸ್ತೆಗೆ ಹೊಂದಿಕೊಂಡಿರುವ ಈ ವೃತ್ತದ ಮೂಲಕ ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತವೆ. ನಾಲ್ಕು ಕಡೆ ರಸ್ತೆಯ ಎಡಭಾಗದಲ್ಲೂ ವಾಹನಗಳ ಸಂಚಾರಕ್ಕೆ ಜಾಗವಿದೆ. ಅಲ್ಲಿ ವಾಹನ ಚಲಾಯಿಸಿಕೊಂಡು ಹೋಗುವುದನ್ನು (ಹಸಿರು ಸಿಗ್ನಲ್‌ ಇರುವಾಗ ಹೋಗಬಹುದು) ತಿಂಗಳಿನಿಂದ ನಿರ್ಬಂಧಿಸಿರುವ ಪೊಲೀಸರು, ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡುತ್ತಿದ್ದಾರೆ.

ರಸ್ತೆಯ ನಾಲ್ಕು ಬದಿಯಲ್ಲೂ ‘ನೋ ಫ್ರೀ ಲೆಫ್ಟ್‌ ಟರ್ನ್‌’ ಅಕ್ಷರವಿರುವ ಫಲಕವನ್ನು ಪೊಲೀಸರು ಅಳವಡಿಸಿದ್ದಾರೆ. ಇದು ವೃತ್ತದಿಂದ ಬಹುದೂರವಿದ್ದು, ಸಾರ್ವಜನಿಕರಿಗೆ ಗೋಚರಿಸುತ್ತಿಲ್ಲ. ಹೀಗಾಗಿ, ಹಲವರು ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಅವರನ್ನು ಪೊಲೀಸರು ತಡೆಯುತ್ತಿದ್ದಾರೆ.

ADVERTISEMENT

‘ಕಸ್ತೂರಬಾ ರಸ್ತೆ ಮೂಲಕ ವಿಠ್ಠಲ್ ಮಲ್ಯ ರಸ್ತೆಗೆ ಹೋಗುವಾಗ ಸಿದ್ಧಲಿಂಗಯ್ಯ ವೃತ್ತದಲ್ಲಿ ಪೊಲೀಸರು, ನನ್ನನ್ನು ತಡೆದಿದ್ದರು.  ‘ಇಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ದಂಡ ಕಟ್ಟಿ’ ಎಂದಿದ್ದರು. ‘ಫಲಕ ಎಲ್ಲಿದೆ?’ ಎಂದು ಕೇಳಿದ್ದಕ್ಕೆ, ‘ಅಲ್ಲಿದೆ’ ಎಂದು ಕೈ ಮಾಡಿ ತೋರಿಸಿದ್ದರು’ ಎಂದು ಖಾಸಗಿ ಕಂಪನಿ ಉದ್ಯೋಗಿ ಎಸ್‌.ರಾಮಚಂದ್ರ ಹೇಳಿದರು.

‘ಫಲಕವು ಮರೆಯಲ್ಲಿತ್ತು. ಕಾರಿನಲ್ಲಿ ಬರುವಾಗ ನನಗೆ ಅದು ಕಂಡಿರಲಿಲ್ಲ. ಅದು ಕಾಣಿಸಿದ್ದರೆ, ಖಂಡಿತವಾಗಿ ನಿಯಮ ಪಾಲಿಸುತ್ತಿದ್ದೆ. ಪೊಲೀಸರ ಬಳಿ ಇದನ್ನೇ ಹೇಳಿದ್ದೆ. ದಂಡ ಕಟ್ಟಿ ಹೋಗಿ ಎಂದು ಪಟ್ಟು ಹಿಡಿದಿದ್ದರಿಂದ, ದಂಡ ಪಾವತಿಸಿದೆ’ ಎಂದರು.

‘ಸಂಚಾರ ನಿರ್ಬಂಧಿಸಿದ ಸ್ಥಳದ ಪಕ್ಕವೇ ಸೂಚನಾಫಲಕ ಅಳವಡಿಸಬೇಕು. ಆದರೆ, ಇಲ್ಲಿ ಪೊಲೀಸರು ಫಲಕ ಅಳವಡಿಸಿದ್ದ ಕ್ರಮ ತಪ್ಪಾಗಿದೆ. ಹೆಚ್ಚು ದಂಡ ವಸೂಲಿ ಮಾಡಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ’ ಎಂದು ದೂರಿದರು.

ಓಲಾ ಕ್ಯಾಬ್‌ ಚಾಲಕ ದಶರಥ್‌, ‘ದೊಡ್ಡ ಗಾತ್ರದ ಹಾಗೂ ರಸ್ತೆಯಲ್ಲಿ ಹೋಗುವ ಪ್ರತಿಯೊಂದು ವಾಹನಗಳ ಸವಾರರಿಗೆ ಕಾಣುವ ರೀತಿಯ ಫಲಕ ಅಳವಡಿಸಬೇಕು. ಆಗ, ಸಾರ್ವಜನಿಕರು ನಿಯಮ ಉಲ್ಲಂಘಿಸುವುದಿಲ್ಲ. ದಂಡ ಕಟ್ಟುವ ಸ್ಥಿತಿಯು ಬರುವುದಿಲ್ಲ’ ಎಂದರು.

ಅಪಘಾತ ತಡೆಗೆ ಕ್ರಮ: ‘ಸಿದ್ಧಲಿಂಗಯ್ಯ ವೃತ್ತದಲ್ಲಿ ಅಪಘಾತಗಳು ಸಂಭವಿಸುತ್ತಿದ್ದವು. ಹೀಗಾಗಿ, ಎಡಭಾಗದ ಜಾಗದಲ್ಲಿ ವಾಹನ ಚಲಾಯಿಸಿಕೊಂಡು ಹೋಗುವುದನ್ನು ನಿರ್ಬಂಧಿಸಿದ್ದೇವೆ. ಅಪಘಾತಗಳ ಸಂಖ್ಯೆ ಕಡಿಮೆ ಆಗಿದೆ’ ಎಂದು ಸಂಚಾರ ವಿಭಾಗದ (ಕೇಂದ್ರ) ಎಸಿಪಿ ಆಂಥೋನಿ ಜಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಲವು ವರ್ಷಗಳಿಂದ ‘ನೋ ಫ್ರೀ ಲೆಫ್ಟ್‌ ಟರ್ನ್‌’ ಫಲಕ ಈ ವೃತ್ತದಲ್ಲಿದೆ. ಫುಟ್‌ಪಾತ್‌ ನಿರ್ಮಾಣ ಕಾಮಗಾರಿಗಾಗಿ ಕಳೆದ ವರ್ಷದ ಬಿಬಿಎಂಪಿಯವರು ಫಲಕ ತೆರವು ಮಾಡಿದ್ದರು. ಫಲಕವಿಲ್ಲದಿದ್ದರಿಂದ ದಂಡ ಸಂಗ್ರಹ ಮಾಡುವುದನ್ನು ನಿಲ್ಲಿಸಿದ್ದೆವು. ಕಾಮಗಾರಿ ಮುಗಿದಿದ್ದರಿಂದ ಜನವರಿ ಅಂತ್ಯದಲ್ಲಿ ಹೊಸ ಫಲಕ ಹಾಕಿದ್ದೇವೆ. ನಿಯಮ ಉಲ್ಲಂಘಿಸುವವರಿಂದ ದಂಡ ಸಂಗ್ರಹಿಸುತ್ತಿದ್ದೇವೆ’ ಎಂದರು.

‘ಎಲ್ಲರಿಗೂ ಕಾಣುವ ರೀತಿಯಲ್ಲಿ ಫಲಕಗಳನ್ನು ಮರುಜೋಡಣೆ ಮಾಡಲು ಸಿಬ್ಬಂದಿಗೆ ಸೂಚಿಸುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.