ADVERTISEMENT

ಎವಿಜಿಸಿ: ಮುನ್ನಡೆ ಗುರಿ, ಅನಿಮೇಷನ್ ನೀತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST

ಬೆಂಗಳೂರು: ಅನಿಮೇಷನ್ ಮತ್ತು ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗಾಗಿ ಉನ್ನತ ಕೇಂದ್ರ ಸ್ಥಾಪನೆ, ಸಹಬಂಡವಾಳ ನಿಧಿ ಸ್ಥಾಪನೆ, ಅನಿಮೇಷನ್ ಪಾರ್ಕ್‌ಗಳ ಸ್ಥಾಪನೆ, ಹೂಡಿಕೆದಾರರಿಗೆ ಆರ್ಥಿಕ ಉತ್ತೇಜನ ಮತ್ತು ರಿಯಾಯಿತಿಗಳು, ಕಲಾ ಶಾಲೆಗಳ ಸ್ಥಾಪನೆ ಮತ್ತಿತರ ಅಂಶಗಳನ್ನು ಒಳಗೊಂಡಿರುವ ಕರ್ನಾಟಕ ಅನಿಮೇಷನ್, ವಿಷ್ಯುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ನೀತಿಯನ್ನು ರಾಜ್ಯ ಸರ್ಕಾರ ಬುಧವಾರ ಬಿಡುಗಡೆ ಮಾಡಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಈ ನೀತಿಯನ್ನು ಬಿಡುಗಡೆ ಮಾಡಿದರು. ಅನಿಮೇಷನ್, ವಿಷ್ಯುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಆಕರ್ಷಕ ಹೂಡಿಕೆ ತಾಣವನ್ನಾಗಿ ಪರಿವರ್ತಿಸುವ ಮಹತ್ವದ ಗುರಿಯನ್ನು ಈ ನೀತಿ ಹೊಂದಿದೆ.

ಈ ಕ್ಷೇತ್ರಗಳಲ್ಲಿ ಅತ್ಯುತ್ತಮ ಗುಣಮಟ್ಟದ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದು, ವ್ಯವಹಾರ ಅಭಿವೃದ್ಧಿಗೆ ಪೂರಕವಾಗಿ ಮೂಲಸೌಕರ್ಯ ಕಲ್ಪಿಸುವುದು, ಎವಿಜಿಸಿ ವಲಯದಲ್ಲಿ ಜನರಿಗೆ ಬಹುಮುಖಿ ಉದ್ಯೋಗಗಳನ್ನು ಒದಗಿಸುವುದು, ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಸಂಸ್ಥೆಗಳನ್ನು ಕರ್ನಾಟಕಕ್ಕೆ ಬರುವಂತೆ ಮಾಡುವುದು, ಅಂತರರಾಷ್ಟ್ರೀಯ ಮಟ್ಟದ ಎವಿಜಿಸಿ ಉದ್ಯಮದ ಹೊರಗುತ್ತಿಗೆ ಕೆಲಸಗಳು ಹೆಚ್ಚಿನ ಪ್ರಮಾಣದಲ್ಲಿ ರಾಜ್ಯಕ್ಕೆ ದೊರೆಯುವಂತೆ ಮಾಡುವ ಉದ್ದೇಶಗಳೂ ಈ ನೀತಿಯಲ್ಲಿವೆ.

ಎರಡು ಹಂತಗಳಲ್ಲಿ ಎವಿಜಿಸಿ ಉನ್ನತ ಕೇಂದ್ರ ಸ್ಥಾಪನೆಯ ಪ್ರಸ್ತಾವವಿದೆ. ಮೊದಲ ಹಂತದಲ್ಲಿ ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾನಿಕ ಶಿಕ್ಷಣ ಸಂಸ್ಥೆ ಅಥವಾ ಪಕ್ವ ಕೇಂದ್ರ (ಇನ್‌ಕ್ಯುಬೇಷನ್ ಸೆಂಟರ್) ಅಸ್ತಿತ್ವಕ್ಕೆ ಬರಲಿದೆ. ಎರಡನೇ ಹಂತದಲ್ಲಿ ರೂ 30 ಕೋಟಿ ವೆಚ್ಚದಲ್ಲಿ ಉತ್ಪಾದನೋತ್ತರ ಮತ್ತು ಸಾಂಖ್ಯಿಕ ಅನುಸಂಧಾನ ಸೌಲಭ್ಯ ಒದಗಿಸಲಾಗುತ್ತದೆ.

ಬೆಂಗಳೂರಿನಲ್ಲಿ 10ರಿಂದ 15 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿರುವ ಉನ್ನತ ಈ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಶೇಕಡ 20ರಷ್ಟು ಮತ್ತು ಕೇಂದ್ರ ಸರ್ಕಾರ ಶೇ 30ರಷ್ಟು ಆರ್ಥಿಕ ನೆರವು ನೀಡಲಿದೆ. ಉಳಿದ ಶೇ 50ರಷ್ಟು ಮೊತ್ತವನ್ನು ಕೈಗಾರಿಕೆಗಳು ಮತ್ತು ಖಾಸಗಿ ಪಾಲುದಾರರಿಂದ ಸಂಗ್ರಹಿಸುವ ಗುರಿ ಇದೆ.

ಎವಿಜಿಸಿ ಕ್ಷೇತ್ರಗಳ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ರೂ 50 ಕೋಟಿ ಮೊತ್ತದ ಬಂಡವಾಳ ನಿಧಿ ಸ್ಥಾಪಿಸಲಾಗುತ್ತದೆ. ಅದರ ಜೊತೆಯಲ್ಲೇ ಸಹ ಬಂಡವಾಳ ನಿಧಿಯನ್ನೂ ಸ್ಥಾಪಿಸಲಿದ್ದು, ಇದರಲ್ಲಿ ಶೇ 26ರಷ್ಟು ಸರ್ಕಾರದ ಕೊಡುಗೆ ಇರುತ್ತದೆ. ಎವಿಜಿಸಿ ಕ್ಷೇತ್ರಕ್ಕಾಗಿ ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಉದ್ದೇಶಿತ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದಲ್ಲಿ ಈ ಉದ್ಯಮಗಳಿಗೆ ಭೂಮಿ ಒದಗಿಸುವುದು, ಕಲಾ ಶಾಲೆಗಳಿಗೆ ಆರ್ಥಿಕ ನೆರವು ಒದಗಿಸುವುದು ಮತ್ತಿತರ ಅಂಶಗಳು ನೂತನ ನೀತಿಯಲ್ಲಿವೆ.

ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಉದ್ದಿಮೆದಾರರಿಗೆ 2009-2014ರ ಕೈಗಾರಿಕಾ ನೀತಿಯ ಅನುಗುಣವಾಗಿ ಬಂಡವಾಳ ಉತ್ತೇಜಕ ಸಹಾಯಧನ, ಮುದ್ರಾಂಕ ಶುಲ್ಕ ವಿನಾಯಿತಿ, ನೋಂದಣಿ ಶುಲ್ಕದಲ್ಲಿ ರಿಯಾಯಿತಿ, ಭೂ ಪರಿವರ್ತನಾ ಶುಲ್ಕ, ಪ್ರವೇಶ ತೆರಿಗೆಗಳ ವಿನಾಯಿತಿ ಮತ್ತಿತರ ಸೌಲಭ್ಯಗಳು ದೊರೆಯಲಿವೆ.

`ಹೊಸ ಶಕೆ ಆರಂಭ~: ಎವಿಜಿಸಿ ನೀತಿ ಬಿಡುಗಡೆ ಮಾಡಿ ಮಾತನಾಡಿದ ಬಚ್ಚೇಗೌಡ, `ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಸೆಮಿಕಂಡಕ್ಟರ್ ನೀತಿಗಳನ್ನು ಹೊರತಂದ ಮೊದಲ ರಾಜ್ಯವೆಂಬ ಹೆಗ್ಗಳಿಕೆ ಕರ್ನಾಟಕಕ್ಕೆ ಇದೆ. ಈಗ ಎವಿಜಿಸಿ ನೀತಿಯ ಬಿಡುಗಡೆಯೊಂದಿಗೆ ಕರ್ನಾಟಕದ ಗೌರವಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ.
ಈ ನೀತಿಯಿಂದ ರಾಜ್ಯದಲ್ಲಿ ಅನಿಮೇಷನ್ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಹೊಸ ಶಕೆ ಆರಂಭವಾಗಲಿದೆ~ ಎಂದರು.

ಕರ್ನಾಟಕ ಜೈವಿಕ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳ ವ್ಯವಸ್ಥಾಪಕ ನಿರ್ದೇಶಕ ಚಕ್ರವರ್ತಿ ಮೋಹನ್, ಬೆಂಗಳೂರು ಅನಿಮೇಷನ್ ಉದ್ಯಮಗಳ ಒಕ್ಕೂಟದ ಅಧ್ಯಕ್ಷ ಬಿರೇನ್ ಘೋಷ್ ಉಪಸ್ಥಿತರಿದ್ದರು.

ರೂ 10 ಸಾವಿರ ಕೋಟಿ ವಹಿವಾಟು
ಎವಿಜಿಸಿ ನೀತಿ ಕುರಿತು ಮಾತನಾಡಿದ ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್, `ಅನಿಮೇಷನ್ ಕ್ಷೇತ್ರದಲ್ಲಿ ಕರ್ನಾಟಕ ಈ ವರ್ಷದ ಅಂತ್ಯದ ವೇಳೆಗೆ 10,000 ಕೋಟಿ ರೂಪಾಯಿಯಷ್ಟು ವಹಿವಾಟು ನಡೆಸುವ ಸಾಮರ್ಥ್ಯ ಹೊಂದಿದೆ. ಈಗ ರಾಜ್ಯ ಸರ್ಕಾರ ಪ್ರಕಟಿಸುವ ಹೊಸ ನೀತಿಯು ಈ ಕ್ಷೇತ್ರಗಳ ವಹಿವಾಟು ಸಾಮರ್ಥ್ಯ ವೃದ್ಧಿಗೆ ಪೂರಕವಾಗಲಿದೆ~ ಎಂದರು.

ಬಹುಮುಖ್ಯವಾಗಿ ಕನ್ನಡ ಚಿತ್ರರಂಗಕ್ಕೆ ಈ ನೀತಿಯಿಂದ ಹೆಚ್ಚಿನ ಲಾಭ ದೊರೆಯುತ್ತದೆ. ಚಿತ್ರೀಕರಣದ ನಂತರದ ಪ್ರಕ್ರಿಯೆಗೆ ಚೆನ್ನೈ, ಮುಂಬೈ ಮತ್ತಿತರ ನಗರಗಳನ್ನು ಕನ್ನಡ ಚಿತ್ರರಂಗ ಅವಲಂಬಿಸಬೇಕಿದೆ. ಆದರೆ, ಈ ನೀತಿಯ ಅನುಷ್ಠಾನದ ಪರಿಣಾಮವಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಅನಿಮೇಷನ್ ಮತ್ತು ವಿಷ್ಯುಯಲ್ ಎಫೆಕ್ಟ್ಸ ಸಂಸ್ಥೆಗಳು ರಾಜ್ಯಕ್ಕೆ ಬರುವುದರಿಂದ ಚಿತ್ರರಂಗದವರು ಹೊರಗಿನವರನ್ನು ಆಶ್ರಯಿಸುವುದು ತಪ್ಪುತ್ತದೆ ಎಂದರು.

ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ರಾಯಚೂರು ಮತ್ತಿತರ ಗ್ರಾಮೀಣ ಪ್ರದೇಶದ ಯುವಜನತೆ ಅನಿಮೇಷನ್ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನೀತಿಯಿಂದ ಅವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತವೆ. ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರಗಳೂ ಎವಿಜಿಸಿ ನೀತಿ ತರಲು ಉತ್ಸುಕವಾಗಿದ್ದು, ರಾಜ್ಯ ಸರ್ಕಾರ ರೂಪಿಸಿರುವ ನೀತಿಯ ಪ್ರತಿ ನೀಡುವಂತೆ ಕೇಳಿವೆ ಎಂದು ತಿಳಿಸಿದರು.


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT