ADVERTISEMENT

ಎಸ್‌ಟಿಪಿ ಅಕ್ರಮಗಳ ತಡೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 18:45 IST
Last Updated 26 ಫೆಬ್ರುವರಿ 2011, 18:45 IST

ಬೆಂಗಳೂರು: ಬೆಂಗಳೂರು ಜಲಮಂಡಳಿಯ ಕೊಳಚೆ ನೀರು ಸಂಸ್ಕರಣೆ ಘಟಕಗಳಲ್ಲಿ (ಎಸ್‌ಟಿಪಿ) ನಡೆಯುತ್ತಿರುವ ದೊಡ್ಡ ಪ್ರಮಾಣ ಅವ್ಯವಹಾರ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೋರಿ ಲೋಕಾಯುಕ್ತರು ಜಲಮಂಡಳಿ ಆಡಳಿತದ ಜವಾಬ್ದಾರಿಯನ್ನೂ ಹೊಂದಿದ ಕಾನೂನು ಸಚಿವ ಸುರೇಶ್‌ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

 ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥ ಡಾ.ಯು.ವಿ.ಸಿಂಗ್ ಮೇಲೆ ಇತ್ತೀಚೆಗೆ ನಡೆದ ದಾಳಿ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಈ ಪತ್ರ ಬರೆದಿದ್ದಾರೆ.

 ‘ಎಸ್‌ಟಿಪಿಗಳ ಬಳಕೆಯಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಅವ್ಯವಹಾರ ನಡೆಯುತ್ತಿದೆ. ಯು.ವಿ.ಸಿಂಗ್ ಮೇಲಿನ ಹಲ್ಲೆ ಪ್ರಕರಣದ ಬಳಿಕ ನಡೆಸಿದ ತನಿಖೆಯಲ್ಲಿ ಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ಬೆಂಗಳೂರಿನ ಜನರ ಆರೋಗ್ಯ ರಕ್ಷಿಸಬೇಕಾದ ಜಲಮಂಡಳಿಯ ಅಧಿಕಾರಿಗಳು ಮತ್ತು ನೌಕರರೇ ಈ ಅಕ್ರಮದಲ್ಲಿ ಷಾಮೀಲಾಗಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಎಸ್‌ಟಿಪಿಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಕಟುವಾಗಿ ಪತ್ರದಲ್ಲಿ ಉಲ್ಲೇಖಿಸಿರುವ ಲೋಕಾಯುಕ್ತರು, ಅವ್ಯವಹಾರ ತಡೆಗೆ ಕೈಗೊಂಡಿರುವ ಕ್ರಮಗಳ ವಿವರ ನೀಡುವಂತೆ ಸಚಿವರನ್ನು ಕೋರಿದ್ದಾರೆ.
 
ಮೇಯರ್ ವಿರುದ್ಧ ಗರಂ: ‘ಯು.ವಿ.ಸಿಂಗ್ ಅವರು ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹೋಗಬೇಕು’ ಎಂದು ಪ್ರತಿಕ್ರಿಯೆ ನೀಡಿದ್ದ ಮೇಯರ್ ನಟರಾಜ್ ವಿರುದ್ಧವೂ ಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ತಮ್ಮ ಕಚೇರಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಮೇಯರ್ ಹೇಳಿಕೆ ಓದಿ ನನಗೆ ಅಚ್ಚರಿ ಆಯಿತು. ಐಎಫ್‌ಎಸ್ ಅಧಿಕಾರಿಗಳು ಸಮವಸ್ತ್ರ ಧರಿಸುವುದಿಲ್ಲ ಎಂಬುದನ್ನು ಅವರು ತಿಳಿಯಬೇಕು. ಪೊಲೀಸ್ ರಕ್ಷಣೆ ಪಡೆದರೆ ಇಂತಹ ಪ್ರಕರಣಗಳ ತನಿಖೆ ನಡೆಸುವುದೂ ಅಸಾಧ್ಯ ಎಂಬುದನ್ನೂ ಅರಿಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.