ADVERTISEMENT

ಏಕಮುಖ ಸಂಚಾರ 16ರಿಂದ ಜಾರಿಗೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2012, 19:30 IST
Last Updated 13 ಜೂನ್ 2012, 19:30 IST
ಏಕಮುಖ ಸಂಚಾರ 16ರಿಂದ ಜಾರಿಗೆ
ಏಕಮುಖ ಸಂಚಾರ 16ರಿಂದ ಜಾರಿಗೆ   

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಸಾಗರ್ ಆಸ್ಪತ್ರೆ ಜಂಕ್ಷನ್ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಸೇರಿದಂತೆ ಸಂಚಾರ ನಿಯಮಗಳಲ್ಲಿ ಕೆಲ ಬದಲಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ. ಈ ಮಾರ್ಪಾಡುಗಳು ಜೂ 16ರಿಂದ ಜಾರಿಗೆ ಬರಲಿವೆ.

ಸಾಗರ್ ಆಸ್ಪತ್ರೆ ಜಂಕ್ಷನ್‌ನಿಂದ ಗುರಪ್ಪನಪಾಳ್ಯ ಜಂಕ್ಷನ್ ನಡುವಿನ ರಸ್ತೆ ಕೇವಲ 40 ಅಡಿ ಅಗಲವಿದೆ. ಈ ಕಿರಿದಾದ ರಸ್ತೆಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಆದ್ದರಿಂದ ಈ ರಸ್ತೆಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ. ಅಂದರೆ, ಹಳೆ ಗುರಪ್ಪನಪಾಳ್ಯ ಜಂಕ್ಷನ್‌ನಿಂದ ಸಾಗರ್ ಆಸ್ಪತ್ರೆ ಜಂಕ್ಷನ್ ಕಡೆಗೆ ಚಲಿಸುತ್ತಿದ್ದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಾಗತ್ ಮುಖ್ಯ ರಸ್ತೆ ಕೂಡ ದ್ವಿಮುಖ ಸಂಚಾರ ವ್ಯವಸ್ಥೆಯಿಂದ ಕೂಡಿದೆ. ಆದ್ದರಿಂದ ಸಾಗರ್ ಆಸ್ಪತ್ರೆ ಜಂಕ್ಷನ್‌ನಿಂದ ಈಸ್ಟ್ ಎಂಡ್ ರಸ್ತೆ ಜಂಕ್ಷನ್‌ಗೆ ಹೋಗುವ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಹಳೇ ಗುರಪ್ಪನಪಾಳ್ಯ ಮತ್ತು ಈಸ್ಟ್ ಎಂಡ್ ರಸ್ತೆಗೆ ಸಂಪರ್ಕ ಕಲ್ಪಿಸುವ ರೆಡ್ಡಿ ಆಸ್ಪತ್ರೆ ರಸ್ತೆಯಲ್ಲಿದ್ದ ದ್ವಿಮುಖ ಸಂಚಾರ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ವಾಹನಗಳು ರೆಡ್ಡಿ ಆಸ್ಪತ್ರೆ ಜಂಕ್ಷನ್ ಕಡೆಯಿಂದ ಬನ್ನೇರುಘಟ್ಟ ಮುಖ್ಯ ರಸ್ತೆ ಕಡೆಗೆ ಸಂಚರಿಸುವಂತಿಲ್ಲ.

ಬಲ ತಿರುವು ನಿಷೇಧ: ಸಾಗರ್ ಆಸ್ಪತ್ರೆ ಜಂಕ್ಷನ್‌ನಲ್ಲಿ ವಾಹನ ಸವಾರರು ಸ್ವಾಗತ್ ಮುಖ್ಯ ರಸ್ತೆಗೆ (ಪಶ್ಚಿಮ ದಿಕ್ಕಿಗೆ) ಬಲ ತಿರುವು ಪಡೆಯುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ವಾಹನಗಳು ಸಾಗರ್ ಆಸ್ಪತ್ರೆ ಜಂಕ್ಷನ್‌ನಿಂದ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸಾಗಿ ಹಳೆ ಗುರಪ್ಪನಪಾಳ್ಯ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ರೆಡ್ಡಿ ಆಸ್ಪತ್ರೆ ರಸ್ತೆಯಲ್ಲಿ ಸಂಚರಿಸಬೇಕು.

ತಿಲಕ್‌ನಗರ ಕಡೆಯಿಂದ ಬರುವ ವಾಹನಗಳು ಸ್ವಾಗತ್ ಮುಖ್ಯರಸ್ತೆಯಿಂದ ಈಸ್ಟ್ ಎಂಡ್ ರಸ್ತೆ ಕಡೆಗೆ ಬಲ ತಿರುವು ಪಡೆಯುವುದನ್ನು ನಿಷೇಧಿಸಲಾಗಿದೆ. ಈ ವಾಹನಗಳು ಸ್ವಾಗತ್ ಮುಖ್ಯ ರಸ್ತೆಯಲ್ಲಿ ಮುಂದುವರಿದು ಸಾಗರ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಮುಂದೆ ಸಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.