ADVERTISEMENT

ಐಸಿಡಿಎಸ್ ಅವ್ಯವಹಾರದ ಸಾಕ್ಷ್ಯ ನಾಶ:ಸಹಾಯಕ ನಿರ್ದೇಶಕ ಬಂಧನ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ಬೆಂಗಳೂರು: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ (ಐಸಿಡಿಎ) ನಡೆದಿರು
ಅವ್ಯವಹಾರಕುರಿತು ಸೋಮವಾರ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾಗ ಸಿ.ಡಿ ತುಂಡರಿಸಿ ಸಾಕ್ಷ್ಯ ನಾಶ ಮಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮುನಿರಾಜು ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಐಸಿಡಿಎಸ್ ಯೋಜನೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾಜ್ಯದ ವಿವಿಧೆಡೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶನಾಲಯ ಸೇರಿದಂತೆ ಹಲವು ಕಚೇರಿಗಳನ್ನು ಮೊಹರು ಮಾಡಿದ್ದರು. ಸೋಮವಾರ ಕೆಲ ಕಚೇರಿಗಳ ತಪಾಸಣೆ ಮುಂದುವರಿಸಲಾಯಿತು.
 
ಅಂಬೇಡ್ಕರ್ ರಸ್ತೆಯ ಬಹುಮಹಡಿ ಕಟ್ಟಡದಲ್ಲಿರುವ ಮುನಿರಾಜು ಅವರ ಕಚೇರಿಯ ಬಾಗಿಲಿನ ಮೊಹರನ್ನು ತೆರೆದ ಡಿವೈಎಸ್‌ಪಿ ಪ್ರಸನ್ನ ವಿ.ರಾಜು ನೇತೃತ್ವದ ತಂಡ ಪರಿಶೀಲನೆ ಆರಂಭಿಸಿತು.

ಕಚೇರಿಯಲ್ಲಿದ್ದ ಕಡತಗಳು ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿತ್ತು. ಅಲ್ಲಿ ದೊರೆತ ಸಿ.ಡಿಯೊಂದರ ವಿವರವನ್ನು ದಾಖಲಿಸಿಕೊಂಡ ತನಿಖಾ ತಂಡದ ಸದಸ್ಯರು, ಅದನ್ನು ಪರಿಶೀಲಿಸುತ್ತಿದ್ದರು.

ಅಷ್ಟರಲ್ಲಿ ಲೋಕಾಯುಕ್ತ ಪೊಲೀಸರ ಮೇಲೆರಗಿದ ಮುನಿರಾಜು ಸಿ.ಡಿ ಕಿತ್ತುಕೊಂಡು ಅದನ್ನು ಛಿದ್ರಗೊಳಿಸಿದ್ದಾರೆ. ನಂತರ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಪ್ರಸನ್ನ ವಿ.ರಾಜು ಅವರು, ಘಟನೆಯ ವಿವರ ನೀಡಿದರು. ಪ್ರಕರಣದ ತನಿಖಾಧಿಕಾರಿಯಾಗಿರುವ ಡಿವೈಎಸ್‌ಪಿ ಅಬ್ದುಲ್ ಅಹದ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು.
 
ಸಾಕ್ಷ್ಯನಾಶಕ್ಕೆ ಯತ್ನಿಸಿದ ಆರೋಪದ ಮೇಲೆ ಮುನಿರಾಜು ಅವರನ್ನು ಬಂಧಿಸಿದ ಅವರು, ಲೋಕಾಯುಕ್ತ ಕಚೇರಿಗೆ ಕರೆತಂದು ಕೆಲಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.

`ವಿಡಿಯೊ ಇತ್ತು~: ಸಿ.ಡಿ ನಾಶದ ಹಿಂದಿನ ಉದ್ದೇಶ ಕುರಿತು ತನಿಖಾ ತಂಡವು ಆರೋಪಿ ಅಧಿಕಾರಿಯನ್ನು ಪ್ರಶ್ನಿಸಿದೆ. `ಪ್ರಕರಣದ ಕೇಂದ್ರ ಬಿಂದುವಾಗಿರುವ ಕ್ರಿಸ್ಟಿ ಫ್ರೈಡ್ ಗ್ರ್ಯಾಮ್ಸ ಕಂಪೆನಿಯ ಅಧಿಕಾರಿಗಳ ಜೊತೆ ನಾನು ವಿವಿಧ ಕಡೆ ಪ್ರವಾಸ ಮಾಡಿರುವ ವಿಡಿಯೊ ತುಣುಕುಗಳು ಸಿ.ಡಿಯಲ್ಲಿದ್ದವು. ಅದು ದೊರೆತಲ್ಲಿ ಮುಂದೆ ತೊಂದರೆ ಆಗಬಹುದು ಎಂಬ ಭಾವನೆಯಿಂದ ಅದನ್ನು ತುಂಡು ಮಾಡಿದ್ದೇನೆ~ ಎಂಬುದಾಗಿ ಮುನಿರಾಜು ಪ್ರತಿಕ್ರಿಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಬಂಧನವನ್ನು ಖಚಿತಪಡಿಸಿದ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್, `ದಾಖಲೆಗಳ ಪರಿಶೀಲನೆ ವೇಳೆ ಮುನಿರಾಜು ಸಿ.ಡಿ ಛಿದ್ರಗೊಳಿಸಿದ್ದಾರೆ.

ಅದರಲ್ಲಿ ಮಹತ್ವದ ಸಾಕ್ಷ್ಯ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಅದನ್ನು ನಾಶ ಮಾಡಿರಬಹುದು ಎಂದು ಶಂಕಿಸಲಾಗಿದೆ. ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.