ADVERTISEMENT

ಒಳ ಒಪ್ಪಂದಕ್ಕೆ ಸೋಲು - ಜಿ.ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಮಾಡಿಕೊಂಡ ಒಳ ಒಪ್ಪಂದಗಳಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, `ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಬೇಕೆಂಬ ದುರುದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸಿದ್ದವು. ಈಗ ಆ ಪಕ್ಷಗಳ ಪ್ರಯತ್ನಕ್ಕೆ ಸೋಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಬಿಜೆಪಿ ಹಿಂದುತ್ವದ ನೆರಳಿನಲ್ಲೇ ತನ್ನ ವಶದಲ್ಲಿ ಇರಿಸಿಕೊಂಡಿತ್ತು. ಈಗ ಬಿಜೆಪಿಯ ಮುಖವಾಡ ಕಳಚಿಬಿದ್ದಿದೆ~ ಎಂದು ತಿಳಿಸಿದ್ದಾರೆ.

`ಹಿಂದೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಕ್ಷೇತ್ರದಲ್ಲಿ ಈಗ ಮತ್ತೆ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರ ವ್ಯಕ್ತಿತ್ವ ಮತ್ತು ಕೇಂದ್ರದ ಯುಪಿಎ ಸರ್ಕಾರದ ಕಾರ್ಯಕ್ರಮಗಳನ್ನು ಬೆಂಬಲಿಸಿ ಜನತೆ ಮತ ನೀಡಿದ್ದಾರೆ. ಈ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣಾ ತಯಾರಿಗೆ ವೇದಿಕೆಯಾಗಲಿದೆ~ ಎಂದು ಹೇಳಿದ್ದಾರೆ.

`ವೈಭವ ಮರಳುವ ಮುನ್ಸೂಚನೆ~: `ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ವೈಭವದ ದಿನಗಳು ಮರಳುವ ಮುನ್ಸೂಚನೆಯನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ನೀಡಿದೆ~ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.

`ಕೇಂದ್ರದ ಯುಪಿಎ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಜನರು ಬೆಂಬಲ ನೀಡಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ~ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.