ADVERTISEMENT

ಔಷಧಿ ಉತ್ಪಾದನೆಯಲ್ಲಿ ಸ್ವಾವಲಂಬನೆ

ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಬಲರಾಮ್ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 19:42 IST
Last Updated 1 ಜುಲೈ 2013, 19:42 IST

ಬೆಂಗಳೂರು: ಸ್ವದೇಶಿ ತಂತ್ರಜ್ಞಾನ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಮೂಲಕ ಔಷಧಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಲರಾಮ್ ಹೇಳಿದರು.

`ಬೆಂಗಳೂರು ಸೈನ್ಸ್ ಫೋರಂ' ನಗರದ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 36ನೇ ವಾರ್ಷಿಕ ವಿಜ್ಞಾನ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ `ರಸಾಯನವಿಜ್ಞಾನ, ಜೀವವಿಜ್ಞಾನ ಮತ್ತು ಕಾನೂನು' ವಿಷಯದ ಕುರಿತು ಮಾತನಾಡಿದರು.

ರಕ್ತ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ `ಗ್ಲಿವೆಕ್' ಔಷಧದ ತಯಾರಿಕೆಯ ಮೇಲೆ ಹಕ್ಕುಸ್ವಾಮ್ಯ ಸಾಧಿಸಲು ಸ್ವಿಸ್ ಮೂಲದ ನೋವಾರ್ಟಿಸ್ ಕಂಪೆನಿ ನಡೆಸಿದ್ದ ಪ್ರಯತ್ನವನ್ನು ವಿಫಲಗೊಳಿಸಿದ ಸುಪ್ರೀಂಕೋರ್ಟ್ ತೀರ್ಪು ಮೈಲಿಗಲ್ಲು. ಕ್ಯಾನ್ಸರ್ ಚಿಕಿತ್ಸೆಗೆ ಕಡಿಮೆ ದರದಲ್ಲಿ ಪರಿಣಾಮಕಾರಿಯಾದ ಔಷಧ ತಯಾರಿಸಲು ಭಾರತೀಯ ಕಂಪೆನಿಗಳಿಗೆ ವರದಾನ. ಇದರಿಂದಾಗಿ ಮಧ್ಯಮ ಹಾಗೂ ಬಡ ವರ್ಗದ ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ ಎಂದರು.

ನೋವಾರ್ಟಿಸ್ ತಯಾರಿಸುವ `ಗ್ಲಿವೆಕ್' ಔಷಧವನ್ನು ರೋಗಿಯೊಬ್ಬ ಒಂದು ತಿಂಗಳು ತೆಗೆದುಕೊಳ್ಳಲು ತಗಲುವ ವೆಚ್ಚ ರೂ 1.20 ಲಕ್ಷ. ಇದನ್ನೇ ಭಾರತೀಯ ಕಂಪೆನಿಗಳು ತಯಾರಿಸಿದರೆ ಆಗುವ ವೆಚ್ಚ ಕೇವಲ ರೂ 8 ಸಾವಿರ. ವಿದೇಶಿ ಮೂಲದ ಕಂಪೆನಿಗಳು ದುಬಾರಿ ದರದ ಮೂಲಕ ಭಾರತೀಯರನ್ನು ಸುಲಿಗೆ ಮಾಡುತ್ತಿವೆ. ಆದಕಾರಣ ವಿಜ್ಞಾನಿಗಳು ಹೆಚ್ಚು ಹೆಚ್ಚು ಸಂಶೋಧನೆ ಕೈಗೊಳ್ಳುವ ಮೂಲಕ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ಪಾದ್ರಿಯೊಬ್ಬರು ಆಫ್ರಿಕಾಕ್ಕೆ ತೆರಳಿದ್ದಾಗ ಮಲೇರಿಯಾ ಕಾಯಿಲೆಗೆ ತುತ್ತಾಗಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಆದಿವಾಸಿಗಳು ಮರದ ತೊಗಟೆಯನ್ನು ನೀರಿನಲ್ಲಿ ಕುದಿಸಿ ಪಾದ್ರಿಯವರಿಗೆ ಕುಡಿಸಿದರು. ಪಾದ್ರಿ ಅವರಿಗೆ ತಗುಲಿದ್ದ ಮಲೇರಿಯಾವನ್ನು ವಾಸಿ ಮಾಡಿದ್ದರು. ತದನಂತರ ಪಾದ್ರಿಯೇ ಕೈಗೊಂಡ ಹೆಚ್ಚಿನ ಸಂಶೋಧನೆಯಿಂದ ಮಲೇರಿಯಾಕ್ಕೆ `ಕ್ವಿನೈನ್' ಔಷಧ ಕಂಡುಹಿಡಿಯಲು ಸಾಧ್ಯವಾಯಿತು. ವಿವಿಧ ಕಾಯಿಲೆಗಳನ್ನು ಪ್ರಕೃತಿಯ ಗಿಡಮೂಲಿಕೆಗಳಿಂದ ಗುಣಪಡಿಸಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಆವಿಷ್ಕಾರಗಳು ನಡೆಯಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.