ADVERTISEMENT

ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ

ಶಾಲಾ ವಾಹನ ಚಾಲಕನ ಕುಕೃತ್ಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 20:05 IST
Last Updated 9 ಜನವರಿ 2014, 20:05 IST

ಬೆಂಗಳೂರು: ಸರ್ಜಾಪುರ ಮುಖ್ಯರಸ್ತೆ ಸಮೀಪದಕೈಕೊಂಡನಹಳ್ಳಿಯಲ್ಲಿರುವ ‘ಎಕ್ಸೀಡ್‌ ಪ್ರಿಸ್ಕೂಲ್‌’ ಶಿಕ್ಷಣ ಸಂಸ್ಥೆಯ ವಾಹನ ಚಾಲಕ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಮಗುವಿನ ಪೋಷಕರು ಎಚ್‌ಎಸ್‌­ಆರ್‌ ಲೇಔಟ್‌ ಠಾಣೆಗೆ ದೂರು ನೀಡಿದ್ದು, ಪೊಲೀ­ಸರು ಚಾಲಕ ಶ್ರೀನಿವಾಸ್‌ನನ್ನು (26) ಬಂಧಿಸಿದ್ದಾರೆ.
ಮಗುವಿನ ಪೋಷಕರು ಮುಂಬೈ ಮೂಲದವ­ರಾಗಿದ್ದು, ಚಾರ್ಟರ್ಡ್‌ ಅಕೌಂಟೆಂಟ್‌ಗಳಾಗಿ (ಸಿ.ಎ) ಕೆಲಸ ಮಾಡುತ್ತಾರೆ. ಮುಂಬೈನಲ್ಲಿ ನೆಲೆಸಿ­ರುವ ತಂದೆ ಆಗಾಗ್ಗೆ ನಗರಕ್ಕೆ ಬಂದು ಹೋಗುತ್ತಾರೆ. ತಾಯಿ, ಮಗುವಿ­ನೊಂದಿಗೆ ದೇವರಬೀಸನ­ಹಳ್ಳಿಯಲ್ಲಿ ವಾಸ ವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ಕೆಲಸಕ್ಕೆ ಹೋಗುವುದರಿಂದ ಮಗುವನ್ನು ಎಕ್ಸೀಡ್‌ ಪ್ರಿಸ್ಕೂಲ್‌ ಸಂಸ್ಥೆ­ಯಲ್ಲಿ ‘ಡೇ ಕೇರ್‌’ಗೆ ಸೇರಿಸಿ­ದ್ದರು. ಚಾಲಕ ಶ್ರೀನಿವಾಸ್‌ ಪ್ರತಿನಿತ್ಯ ಸಂಜೆ ಮಗುವನ್ನು ಶಾಲಾ ವಾಹನದಲ್ಲಿ ಮನೆಗೆ ಬಿಟ್ಟು ಹೋಗುತ್ತಿದ್ದ. ಅದೇ ರೀತಿ ಆತ ಮಂಗಳವಾರ (ಜ.7) ಸಂಜೆ ಮಗು­ವನ್ನು ಮನೆಗೆ ಕರೆದುಕೊಂಡು ಬರುವ ಮಾರ್ಗಮಧ್ಯೆ ವಾಹನ ನಿಲ್ಲಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮಗುವಿನ ಜನನಾಂಗದ ಭಾಗದಲ್ಲಿ ಗಾಯವಾಗಿ­ರು­­ವುದನ್ನು ಗಮನಿಸಿದ ತಾಯಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ­ದೊಯ್ದು ತಪಾಸಣೆ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆ ಸಂಗತಿಯನ್ನು ಗಮ­ನಿ­ಸಿದ ತಾಯಿ, ಮಗು ಶಾಲೆಯಲ್ಲಿ ಬಹಿ­ರ್ದೆಸೆಗೆ ಹೋಗಿ ಬಳಿಕ ಒಳ­ಉಡು­ಪನ್ನು ಬ್ಯಾಗ್‌ನಲ್ಲಿ ಇಟ್ಟು­ಕೊಂಡು ಬಂದಿ­ರ­ಬಹುದೆಂದು ಭಾವಿಸಿ­ದ್ದರು ಎಂದು ತನಿಖಾಧಿಕಾರಿಗಳು ಹೇಳಿದರು.

ಆದರೆ, ಸಮಯ ಕಳೆದಂತೆ ಅಳಲಾರಂಭಿಸಿದ ಮಗು ರಾತ್ರಿಯಿಡೀ ನಿದ್ರೆ ಮಾಡಿರಲಿಲ್ಲ. ಬುಧವಾರ ಬೆಳಿಗ್ಗೆ ಸಹ ಮಗು ಅದೇ ರೀತಿ ವರ್ತಿಸಿತ್ತು. ಇದರಿಂದ ಅನು­ಮಾನ­ಗೊಂಡ ತಾಯಿ ಮಗುವನ್ನು ಮನೆಯ ಸಮೀಪದ ಉದ್ಯಾನಕ್ಕೆ ಕರೆದೊಯ್ದು ಮುದ್ದು ಮಾಡುತ್ತಾ ಕೇಳಿದಾಗ, ‘ಚಾಲಕ ಕೆಟ್ಟವನು, ಆತನಿಗೆ ಹೊಡೆಯಿರಿ’ ಎಂದು ಹೇಳಿತ್ತು ಎಂದು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಅತ್ಯಾಚಾರ, ಮಹಿಳೆಯ ಗೌರವಕ್ಕೆ ಧಕ್ಕೆ ಮತ್ತು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಾಲಕ ಕೆಟ್ಟವನು: ಮಗು ಮಂಗಳ­ವಾರ ಸಂಜೆ ತನ್ನ ಒಳಉಡುಪನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಮನೆಗೆ ಬಂದಿತ್ತು.

‘ಡ್ರೈವರ್‌ ವಾಲಾ ಅಚ್ಚಾ ನಹಿ’
‘ಡ್ರೈವರ್‌ ವಾಲಾ ಅಚ್ಚಾ ನಹಿ, ಉಸ್ಕೊ ಮಾರೊ’– ಆರೋಪಿ ಶ್ರೀನಿವಾಸ್‌ನ ಕ್ರೌರ್ಯ­ದಿಂದ ನಲು­­ಗಿ­ರುವ ಮಗುವನ್ನು ಪೊಲೀ­ಸರು ಮಾತನಾಡಿಸಿದಾಗ ಮಗು ಹೇಳಿದ ತೊದಲು ನುಡಿಗಳಿವು.

‘ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕುವ ಉದ್ದೇಶ­ದಿಂದ ಮಗುವನ್ನು ಮಾತನಾಡಿ­ಸ­ಲಾಯಿತು. ಆಗ ಮಗು ಶ್ರೀನಿ­ವಾಸ್‌ನ ಹೆಸರನ್ನು ಪ್ರಸ್ತಾಪಿಸದೆ ಚಾಲಕ ಒಳ್ಳೆಯವನಲ್ಲ, ಆತನಿಗೆ ಹೊಡೆಯಿರಿ ಎಂದು ಹೇಳಿತು’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಹಿಳಾ ಸಿಬ್ಬಂದಿ ಇದ್ದರು
‘ಶಾಲಾ ವಾಹನದ ಚಾಲಕ­ನೊಬ್ಬ ಏಳು ತಿಂಗಳ ಹಿಂದೆ ಕೆಲಸ ಬಿಟ್ಟು ಹೋಗಿದ್ದ. ಆ ನಂತರ ಶ್ರೀನಿ­ವಾಸ್‌ನನ್ನು ಕೆಲಸಕ್ಕೆ ಸೇರಿಸಿಕೊಂಡಿ­ದ್ದೆವು. ಮಕ್ಕಳನ್ನು ಕರೆದೊಯ್ಯುವ ವಾಹನದಲ್ಲಿ ಮಹಿಳಾ ಸಿಬ್ಬಂದಿ­ಯನ್ನು ಕಳುಹಿಸುತ್ತಿದ್ದೆವು. ಅವರ ಕಣ್ತಪ್ಪಿಸಿ ಈ ಘಟನೆ ಹೇಗೆ ನಡೆ­ಯಿತು ಎಂಬುದು ಗೊತ್ತಿಲ್ಲ’ ಎಂದು ಶಾಲಾ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.

ಶ್ರೀನಿವಾಸ್‌, ಕುಟುಂಬ ಸದಸ್ಯ­ರೊಂದಿಗೆ ದೊಡ್ಡ­ನೆಕ್ಕುಂದಿಯಲ್ಲಿ ವಾಸವಾಗಿದ್ದ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.