ADVERTISEMENT

ಕಂದಾಯ ವಿಭಾಗದ ಅಕ್ರಮ: ಸಿಐಡಿ ತನಿಖೆಗೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಕಂದಾಯ ಇಲಾಖೆಯ  ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಮುನಿರತ್ನ , ಆಯುಕ್ತ ಲಕ್ಷ್ಮೀನಾರಾಯಣ, ಮೇಯರ್ ಬಿ.ಎಸ್.ಸತ್ಯನಾರಾಯಣ ಭಾಗವಹಿಸಿದ್ದರು
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಮುನಿರತ್ನ , ಆಯುಕ್ತ ಲಕ್ಷ್ಮೀನಾರಾಯಣ, ಮೇಯರ್ ಬಿ.ಎಸ್.ಸತ್ಯನಾರಾಯಣ ಭಾಗವಹಿಸಿದ್ದರು   

ರಾಜರಾಜೇಶ್ವರಿನಗರ: ಹೇರೋಹಳ್ಳಿ ಕಂದಾಯ ವಿಭಾಗ ಸೇರಿದಂತೆ ಐದು ವಾರ್ಡ್‌ಗಳಲ್ಲಿ ನಡೆದಿರುವ ಭಾರಿ ಅಕ್ರಮಗಳನ್ನು ಬಯಲಿಗೆ ಎಳೆಯಲು ಸಿಐಡಿ ತನಿಖೆಗೆ ಒಪ್ಪಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿಬಿಎಂಪಿಗೆ ಸೇರ್ಪಡೆಯಾದ ನಗರಸಭೆ ಮತ್ತು ಗ್ರಾಮೀಣ ಪ್ರದೇಶ­ಗಳಲ್ಲಿ ಅಕ್ರಮ ನಡೆದಿದೆ. ವಿಶೇಷ ಲೆಕ್ಕ ಪರಿಶೋಧನೆ ಮಾಡಿ,  ಅಗತ್ಯವಿದ್ದರೆ ಸಿಐಡಿ ತನಿಖೆಗೆ ಒಪ್ಪಿಸಲಾಗುವುದು ಎಂದ ಅವರು ಹೇರೋಹಳ್ಳಿ ಸೇರಿದಂತೆ ಕೆಲವು ಸಹಾಯಕ ಕಂದಾಯ ಅಧಿ­ಕಾರಿಗಳ ಕಚೇರಿಗಳಿಗೆ ಸಿ.ಸಿ.ಟಿ.ವಿ ಅಳ­ವಡಿಸಲು ಆಯುಕ್ತರಿಗೆ ಸೂಚಿಸಿ­ದರು.

ಅಕ್ರಮ ಸಕ್ರಮಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು ಶೀಘ್ರ ಜಾರಿಗೆ ಬರಲಿದೆ. ಇದರಿಂದ ಸಂಗ್ರಹಗೊಳ್ಳುವ ಸಾವಿ­ರಾರು ಕೋಟಿ ತೆರಿಗೆಯಿಂದ ನಗರದ ಅಭಿ­ವೃದ್ದಿ  ಮಾಡಲು ಸಾಧ್ಯ ಎಂದು ಹೇಳಿದರು. ರಾಜರಾಜೇಶ್ವರಿನಗರ ವಲಯದಲ್ಲಿ ಗರಿಷ್ಠ ₨ 200ಕೋಟಿ ತೆರಿಗೆ ಬರಬೇಕು. ಕೇವಲ ₨ 95 ಕೋಟಿ ಗುರಿಯನ­ಟ್ಟುಕೊಂಡಿರುವುದು ಗಮನಿಸಿದರೆ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಆಯುಕ್ತ ಎಂ. ಲಕ್ಷ್ಮೀನಾರಾಯಣ ಮಾತನಾಡಿ ಸಚ್ಚಿದಾನಂದ ಬಡಾವಣೆ ನಿವಾಸಿಗಳಿಗೆ ಹೈಕೋರ್ಟ್‌ ಆದೇಶ­ದಂತೆ ಖಾತೆ ಮತ್ತು ನಕ್ಷೆ ನೀಡುವುದರ ಜತೆಗೆ ಬಂಗಾರಪ್ಪ ನಗರ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.