ADVERTISEMENT

ಕಂಪೆನಿಗಳ ಮೇಲೆ ಒತ್ತಡ ಸರಿಯಲ್ಲ

ಶೇ 2ರಷ್ಟು ಹಣ ಸಾಮಾಜಿಕ ಕಾರ್ಯಕ್ಕೆ ಮೀಸಲು: ಅಜೀಂ ಪ್ರೇಮ್‌ಜಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2013, 19:27 IST
Last Updated 16 ಫೆಬ್ರುವರಿ 2013, 19:27 IST
ವಿಪೊ ಲಿಮಿಟೆಡ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಏಟ್ರೀ ಸಂಸ್ಥೆಯ ಅಧ್ಯಕ್ಷ ಡಾ.ಕಮಲ್ ಬಾವಾ ಮತ್ತು ವಿಪ್ರೋ ಲಿಮಿಟೆಡ್‌ನ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ನಗರದ ಕೆ.ಕೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ `ಅರ್ಥೇನ್-2013' ಪ್ರಶಸ್ತಿಯನ್ನು ವಿತರಿಸಿದರು	-ಪ್ರಜಾವಾಣಿ ಚಿತ್ರ
ವಿಪೊ ಲಿಮಿಟೆಡ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಏಟ್ರೀ ಸಂಸ್ಥೆಯ ಅಧ್ಯಕ್ಷ ಡಾ.ಕಮಲ್ ಬಾವಾ ಮತ್ತು ವಿಪ್ರೋ ಲಿಮಿಟೆಡ್‌ನ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ನಗರದ ಕೆ.ಕೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ `ಅರ್ಥೇನ್-2013' ಪ್ರಶಸ್ತಿಯನ್ನು ವಿತರಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: `ಕಾರ್ಪೊರೇಟ್ ಕಂಪೆನಿಗಳು ತಮ್ಮ ಲಾಭದಲ್ಲಿ ಶೇ 2ರಷ್ಟು ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಕಡ್ಡಾಯವಾಗಿ ಮೀಸಲಿಡಬೇಕು ಎಂದು ಸರ್ಕಾರ ಒತ್ತಡ ಹೇರುವುದು ಸರಿಯಲ್ಲ' ಎಂದು ವಿಪ್ರೊ ಲಿಮಿಟೆಡ್‌ನ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಹೇಳಿದರು. ವಿಪ್ರೊ ಲಿಮಿಟೆಡ್ ನಗರದಲ್ಲಿ ಶನಿವಾರ ಆಯೋಜಿಸಿದ್ದ `ಅರ್ಥೇನ್-2013' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಬಹಳಷ್ಟು ಕಾರ್ಪೊರೇಟ್ ಕಂಪೆನಿಗಳು ಹಿಂದಿನಿಂದಲೂ ಸಾಮಾಜಿಕ ಕಾರ್ಯಕ್ಕಾಗಿ ತಮ್ಮ ಲಾಭದ ಬಹುಭಾಗವನ್ನು ಮೀಸಲಿಡುತ್ತಾ ಬಂದಿವೆ. ಆದರೆ, ಸರ್ಕಾರ ಲಾಭದ ಭಾಗವನ್ನು ಕಡ್ಡಾಯವಾಗಿ ಮೀಸಲಿಡಬೇಕು ಎಂದು ಒತ್ತಡ ತಂದರೆ ಕಂಪೆನಿಗಳು ಸುಳ್ಳು ಮಾಹಿತಿ ನೀಡುವ ಸಾಧ್ಯತೆಗಳಿವೆ. ನಮ್ಮ ಕಂಪೆನಿ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ' ಎಂದರು.

`ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ಒಟ್ಟಿಗೆ ಸಾಗಬೇಕು. ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಮಾಲಿನ್ಯ ಪ್ರಮಾಣ ತಗ್ಗಿಸಲು ಎಲ್ಲರೂ ಪ್ರಯತ್ನಿಸಬೇಕು. ನಮ್ಮ ದೇಶದಲ್ಲಿ ಸೇವಾವಲಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ, ಸೇವಾವಲಯ ಮತ್ತು ಉತ್ಪಾದನಾ ವಲಯಗಳು ಒಟ್ಟಾಗಿ ಸಾಗಬೇಕು. ಆಗ ಮಾತ್ರ ಸಂಪೂರ್ಣ ಅಭಿವೃದ್ಧಿ ಸಾಧ್ಯ. ನಮ್ಮಲ್ಲೂ ಚೀನಾ ಮಾದರಿಯಲ್ಲಿ ಉತ್ಪಾದನಾ ವಲಯ ಅಭಿವೃದ್ಧಿಯಾಗಬೇಕಿದೆ' ಎಂದರು.
`ನಾನು ವೈದ್ಯೆಯಾಗಬೇಕು ಎಂಬ ಕನಸಿದೆ. ನಿಮ್ಮ ವಿಶ್ವವಿದ್ಯಾಲಯದಲ್ಲಿ ಅದಕ್ಕೆ ಅವಕಾಶವಿದೆಯೇ' ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ನಮ್ಮ ವಿಶ್ವವಿದ್ಯಾಲಯ ವೈದ್ಯಕೀಯ ಕಾಲೇಜನ್ನು ಹೊಂದಿಲ್ಲ. ಶಿಕ್ಷಕರ ಬೋಧನಾ ಕೌಶಲ ಅಭಿವೃದ್ಧಿಗೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಹೆಚ್ಚಿನ ಆದ್ಯತೆ ನೀಡುತ್ತಿದೆ' ಎಂದರು.

`ವಿಪ್ರೊ ಅಧ್ಯಕ್ಷನಾಗದಿದ್ದರೆ ನಾನೊಬ್ಬ ಉತ್ತಮ ಶಿಕ್ಷಕನಾಗಿರುತ್ತಿದ್ದೆ. 21 ವರ್ಷಗಳ ವಿಪ್ರೋ ಜತೆಗಿನ ಜೀವನ ನನಗೆ ತೃಪ್ತಿ ತಂದಿದೆ. ಮುಂದಿನ ಐದು ವರ್ಷಗಳಲ್ಲಿ ಕಂಪೆನಿ ಇನ್ನೂ ಸಾಕಷ್ಟು ಬೆಳವಣಿಗೆ ಹೊಂದಿರಲಿದೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದೇ ಕಂಪೆನಿಯ ಗುರಿ' ಎಂದು ಅವರು ತಿಳಿಸಿದರು. `ನನ್ನ ವೃತ್ತಿ ಬದುಕಿನ ಸಾಧನೆಗೆ ಮಹಾತ್ಮ ಗಾಂಧೀಜಿ ಪ್ರೇರಣೆಯಾದರೆ, ವೈಯಕ್ತಿಕ ಬದುಕಿಗೆ ನನ್ನ ತಾಯಿ ಸ್ಫೂರ್ತಿ. ಇಲ್ಲಿಯವರೆಗೆ ಸಾಗಿದ ಜೀವನಯಾನದ ಬಗ್ಗೆ ಸಂತೋಷವಿದೆ' ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಶಿಷ್ಯ ಶಾಲೆ (ಹೊಸೂರು), ಡಿಪಿಎಸ್ ಇಂಟರ್ ನ್ಯಾಷನಲ್ (ನವದೆಹಲಿ), ಸಕಾರ್ ಆಂಗ್ಲ ಮಾಧ್ಯಮ ಶಾಲೆ (ಅಹಮದಾಬಾದ್), ಭಾವನಾಸ್ ಆದರ್ಶ ವಿದ್ಯಾಲಯ (ಕೊಚ್ಚಿ), ನವೋದಯ ವಿದ್ಯಾಲಯ (ಆಲಮಟ್ಟಿ) ಮತ್ತು ಬೆಂಗಳೂರಿನ ಎಇಸಿಎಸ್ ಮಗ್ನೋಲಿಯಾ ಮಾರುತಿ ಶಾಲೆ, ಪ್ರಕ್ರಿಯಾ ಗ್ರೀನ್ ವಿಸ್‌ಡಮ್ ಶಾಲೆ ಹಾಗೂ ಕೆ.ಕೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ `ಅರ್ಥೇನ್-2013' ಪ್ರಶಸ್ತಿಗಳನ್ನು ನೀಡಲಾಯಿತು.
ಹೂಸ್ಟನ್ ವಿಶ್ವವಿದ್ಯಾಲಯ (ಅಮೆರಿಕ), ಐಸಿಟಿ (ಮುಂಬೈ), ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜು (ಶ್ರೀಪೆರಂಬೂರು), ಐಐಎಂ (ಶಿಲ್ಲಾಂಗ್),     ಆರ್.ಇ ಕಾಲೇಜು (ಚೆನ್ನೈ), ಐಐಟಿ (ದೆಹಲಿ), ಸೇತು ತಂತ್ರಜ್ಞಾನ ಸಂಸ್ಥೆ  (ಮಧುರೆ), ಟೆರಿ ವಿಶ್ವವಿದ್ಯಾಲಯ    (ದೆಹಲಿ), ಡಿಎಂಯುಎನ್ (ಡಾರ್ಜ ಲಿಂಗ್), ಗ್ರೇಟ್ ಲೇಕ್ಸ್ ತಾಂತ್ರಿಕ ಸಂಸ್ಥೆ (ಗುರ್‌ಗಾಂವ್) ಮತ್ತು ಐಐಎಂ   (ಕೋಜಿಕೋಡ್) ವಿದ್ಯಾಸಂಸ್ಥೆಗಳಿಗೆ   `ಅರ್ಥೇನ್-2013' ಪ್ರಶಸ್ತಿಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.