ADVERTISEMENT

ಕಂಪ್ಯೂಟರ್ ಸರ್ವಿಸ್ ಸಂಸ್ಥೆಯಲ್ಲಿ ಅಗ್ನಿ ಅನಾಹುತ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 20:10 IST
Last Updated 3 ಫೆಬ್ರುವರಿ 2012, 20:10 IST

ಬೆಂಗಳೂರು: ನಗರದ ಹೊಸೂರು ರಸ್ತೆ ಸಮೀಪದ ಗಾರ್ವೆಬಾವಿ ಪಾಳ್ಯದಲ್ಲಿರುವ `ಆರ್ ಲಾಜಿಕ್ ಟೆಕ್ನಾಲಜಿ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟಡ್~ ಹೆಸರಿನ ಕಂಪ್ಯೂಟರ್ ಸರ್ವಿಸ್ ಸಂಸ್ಥೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕಂಪ್ಯೂಟರ್‌ಗಳು ಮತ್ತು ಬಿಡಿ ಭಾಗಗಳು ಸುಟ್ಟು ಹೋಗಿವೆ.

ಆರು ಅಂತಸ್ತಿನ ಕಟ್ಟಡದ ಒಂದನೇ ಅಂತಸ್ತಿನಲ್ಲಿರುವ ಆ ಸಂಸ್ಥೆಯ ಒಳ ಭಾಗದಲ್ಲಿ ರಾತ್ರಿ ಎಂಟು ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು. ಈ ಸಂದರ್ಭದಲ್ಲಿ ಸಂಸ್ಥೆಯ ಒಳ ಭಾಗದಲ್ಲೇ ಇದ್ದ ನಾಲ್ಕೈದು ಮಂದಿ ನೌಕರರು ಕೂಡಲೇ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾದರು. ನಂತರ ಅವರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.

23 ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಐದು ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಘಟನೆಯಲ್ಲಿ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಪ್ರಿಂಟರ್‌ಗಳು ಹಾಗೂ ಕಂಪ್ಯೂಟರ್ ಬಿಡಿ ಭಾಗಗಳು ಸುಟ್ಟು ಹೋಗಿವೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಈ ಅವಘಡ ಸಂಭವಿಸಿರುವ ಸಾಧ್ಯತೆ ಇದೆ. ಅಗ್ನಿ ಅನಾಹುತದಿಂದ ಆಗಿರುವ ನಷ್ಟದ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನಿರ್ದೇಶಕ ಬಿ.ಜಿ.ಚೆಂಗಪ್ಪ, `ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಸಿಬ್ಬಂದಿ ಕಾರ್ಯಾಚರಣೆಗೆ ಅಡ್ಡಿಯಾಯಿತು. ಸಂಸ್ಥೆಯಲ್ಲಿ ಅಗ್ನಿ ಅನಾಹುತ ತಡೆಗೆ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅಲ್ಲದೇ ಅಗ್ನಿನಂದಕ ಸಲಕರಣೆಗಳು ಸುಸ್ಥಿತಿಯಲ್ಲಿಲ್ಲ. ಘಟನೆಯಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ~ ಎಂದು ಹೇಳಿದರು. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.