ADVERTISEMENT

ಕಚೇರಿ ಪೀಠೋಪಕರಣ ಧ್ವಂಸ

ತಹಶೀಲ್ದಾರ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 20:13 IST
Last Updated 17 ಜುಲೈ 2017, 20:13 IST
ತಹಶೀಲ್ದಾರ ಕೊಠಡಿ ಬಾಗಿಲು ಧ್ವಂಸಗೊಂಡಿರುವುದು
ತಹಶೀಲ್ದಾರ ಕೊಠಡಿ ಬಾಗಿಲು ಧ್ವಂಸಗೊಂಡಿರುವುದು   

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಬಿಜೆಪಿ ಘಟಕವು ತಹಶೀಲ್ದಾರ್ ವಿರುದ್ಧ ಸೋಮವಾರ ಆಯೋಜಿಸಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ  ತಿರುಗಿತು.
ಪ್ರತಿಭಟನಾಕಾರರ ಆಕ್ರೋಶಕ್ಕೆ ತಹಶೀಲ್ದಾರ್ ಕಚೇರಿ ಬಾಗಿಲು, ಕಚೇರಿ ಪೀಠೋಪಕರಣಗಳು ಧ್ವಂಸಗೊಂಡವು. ಕಿಟಕಿಗಳ ಗಾಜು ಪುಡಿಯಾದವು.

ತಹಶೀಲ್ದಾರ್ ಗಂಗೇಶ್ ಅವರ ನಾಮಫಲಕ ಕಿತ್ತೆಸೆದು ಕುರ್ಚಿಗಳನ್ನು ಚೆಲ್ಲಾಪಿಲ್ಲಿ ಮಾಡಲಾಯಿತು. ಕಾಗದ ಪತ್ರ ಹರಿದು ಹಾಕಿ ಗಲಾಟೆ ನಡೆಸಿದ್ದರಿಂದ ಸಿಬ್ಬಂದಿ ಕಚೇರಿಯಿಂದ ಹೊರ ಓಡಿದರು.

ಘಟನೆಗೂ ಮುನ್ನ ಪಟ್ಟಣದ ನೆಹರು ಸರ್ಕಲ್‌ನಿಂದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ತಹಶೀಲ್ದಾರ್ ವಿರುದ್ಧ ಮನವಿ ಸಲ್ಲಿಸಿದರು.

ADVERTISEMENT

ಗಲಾಟೆಗೆ ಕಾರಣ ಏನು:  ತಹಶೀಲ್ದಾರ್‌ ವಿರುದ್ಧ ಪ್ರತಿಭಟನೆ ಶಾಂತಿಯುತವಾಗಿ ನಡೆದಿತ್ತು. ಪ್ರತಿಭಟನೆ ಬಳಿಕ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಎದುರು ಉಪಹಾರ ಸೇವಿಸುತ್ತಿದ್ದರು.

ಆ ವೇಳೆ ತಹಶೀಲ್ದಾರ್ ಆರ್.ಗಂಗೇಶ್ ಅವರು ಮುಖಂಡ ಜೆ.ಸಿ.ಮಾಧುಸ್ವಾಮಿ ವಿರುದ್ಧ ಹಗುರವಾಗಿ ಮಾತನಾಡಿದರು ಎಂಬ ಸುದ್ದಿ ಹಬ್ಬಿದ್ದರಿಂದ ಬಿಜೆಪಿ ಕಾರ್ಯಕರ್ತರು ಮತ್ತೇ ತಹಶೀಲ್ದಾರ್ ಕಚೇರಿಗೆ  ತೆರಳಿ ಗಲಾಟೆ ಮಾಡಿದರು.

ಕಚೇರಿ ಪೀಠೋಪಕರಣಗಳನ್ನು ಧ್ವಂಸ ಮಾಡಿದರು. ಆ ವೇಳೆ ತಹಶೀಲ್ದಾರ್‌ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಘಟನೆಯಲ್ಲಿ ಸಂಬಂಧಿಸಿದಂತೆ ಎಂಟು ಮಂದಿ ವಿರುದ್ಧ ತಹಶೀಲ್ದಾರ್ ಗಂಗೇಶ್‌ ಅವರು ದೂರು ದಾಖಲಿಸಿದ್ದಾರೆ.

ಮುಖ್ಯಾಂಶಗಳು

* ತಾಳ್ಮೆ ಕಳೆದುಕೊಂಡ ಪ್ರತಿಭಟನಾಕಾರರು

* ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ
* 8 ಜನರ ವಿರುದ್ಧ ಪ್ರಕರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.