ADVERTISEMENT

ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 30 ಜನವರಿ 2012, 19:30 IST
Last Updated 30 ಜನವರಿ 2012, 19:30 IST
ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು
ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು   

ಬೆಂಗಳೂರು: ಪಾನಮತ್ತನಾಗಿದ್ದ ಕೂಲಿ ಕಾರ್ಮಿಕನೊಬ್ಬ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ನಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯಪುರ ಸಮೀಪದ ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.

ತಮಿಳುನಾಡು ಮೂಲದ ಮುರುಗನ್ (40) ಮೃತಪಟ್ಟವರು. ಅವರು ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ನಿರ್ಮಾಣವಾಗುತ್ತಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಾನಮತ್ತರಾಗಿದ್ದ ಅವರು ರಾತ್ರಿ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿ ಮಲಗಿದ್ದರು. ಅವರು ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ಮಹಡಿಯ ಅಂಚಿಗೆ ಬಂದಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಐವರು ಬಾಲಕರ ರಕ್ಷಣೆ

ನಗರದ ಹಲಸೂರು ಸಮೀಪದ ವಿವಿ ಗಾರ್ಡನ್ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಐದು ಮಂದಿ ಅಪ್ರಾಪ್ತ ಬಾಲಕರನ್ನು ಮಕ್ಕಳ ಸಹಾಯವಾಣಿ ಸಿಬ್ಬಂದಿ ಸೋಮವಾರ ರಕ್ಷಿಸಿದ್ದಾರೆ.

ವಿವಿ ಗಾರ್ಡನ್‌ನ ಮನೆಯೊಂದರಲ್ಲಿ ಹಲವು ದಿನಗಳಿಂದ ಅಪ್ರಾಪ್ತ ಮಕ್ಕಳನ್ನು ಸ್ಕ್ರೀನ್ ಪ್ರಿಂಟಿಂಗ್ ಸೇರಿದಂತೆ ಹಲವು ಕಠಿಣ ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಥಳೀಯರೊಬ್ಬರು ದೂರವಾಣಿ ಮುಖಾಂತರ ತಿಳಿಸಿದರು. 

ಈ ಮಾಹಿತಿಯ ಆಧಾರದ ಮೇಲೆ ಬಾಲಕರನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಕೇಂದ್ರ(ಸಿಡಬ್ಲ್ಯು ಸಿ)ಕ್ಕೆ  ದಾಖಲಿಸಲಾಗಿದ್ದು, ಬಾಲಕರ ಪೋಷಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇವೆ ಎಂದು ಸಹಾಯವಾಣಿಯ ಸಿಬ್ಬಂದಿಯೊಬ್ಬರು ತಿಳಿಸಿದರು.

ಕಡಿಮೆ ಸಂಬಳ ನೀಡಿ ಹೆಚ್ಚು ಕೆಲಸ ಮಾಡಿಸಿಕೊಳ್ಳಬಹುದು ಎಂಬ ದೃಷ್ಟಿಯಿಂದ ಇಂತಹ ಕೃತ್ಯ ಹೆಚ್ಚುತ್ತಿವೆ. ಈ ಮನೆಯ ಮಾಲಿಕರು ಹಲವು ದಿನಗಳಿಂದ ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಎರಡು ದಿನಗಳ ಹಿಂದೆಯಷ್ಟೆ ಇದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಬಾಲಕನೊಬ್ಬ ಮೃತಪಟ್ಟಿದ್ದು, ಅವರ ಪೋಷಕರಿಗೂ ತಿಳಿಸದೆ ಅಂತ್ಯಕ್ರಿಯೆ ಮಾಡಿದ್ದಾರೆ. ಮಾಲಿಕರು ಪರಾರಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಸಿಬ್ಬಂದಿ ತಿಳಿಸಿದರು.

ಬಂಧನ: ಇಪ್ಪತ್ತೈದು ಲಕ್ಷ ಮೌಲ್ಯದ ಬಿಸ್ಕೆಟ್, ರಸ್ಕ್ ಇತರೆ ತಿಂಡಿಗಳು ತುಂಬಿದ್ದ ಪೆಟ್ಟಿಗೆಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿ, ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ ಮೂಲದ ವಿಜಯ್‌ಸಿಂಗ್ ರಾಥೋಡ್(24) ಹಾಗೂ ಮಹಾರಾಷ್ಟ್ರ ಮೂಲದ ದತ್ತು ಅಂಕುಶ್ ಡಾಸ್ಕರ್(21) ಬಂಧಿತ ಆರೋಪಿಗಳು. ನಗರದ ನೆಲಮಂಗಲದಲ್ಲಿರುವ ಬಿಸ್ಕೆಟ್ ಕಾರ್ಖಾನೆಯಿಂದ ಹಲವು ತಿಂಡಿ ಸಾಮಗ್ರಿಗಳು ತುಂಬಿದ್ದ 2538 ಪೆಟ್ಟಿಗೆಗಳನ್ನು ಸಿಂಗಸಂದ್ರದ ಕಂಪೆನಿಯೊಂದರ ಮೂಲಕ ಎರಡು ಲಾರಿಗಳಲ್ಲಿ ಮದುರೈಗೆ ಕಳುಹಿಸಿಕೊಡಲು ಕಂಪೆನಿ ಮಾಲೀಕರು ಕರಾರು ಮಾಡಿಕೊಂಡಿದ್ದರು.

ಎರಡು ಕಂಪೆನಿಗಳ ಮಾಲೀಕರ ಬಳಿ ಪೆಟ್ಟಿಗೆಗಳನ್ನು ಸಾಗಿಸಲು ವಾಹನದ ಕೊರತೆ ಇದ್ದ ಕಾರಣ ಮತ್ತೊಂದು ಕಂಪೆನಿಯ ಎರಡು ಲಾರಿಗಳನ್ನು ಬಾಡಿಗೆ ಪಡೆದಿದ್ದರು. ಈ ಕಂಪೆನಿಯ ಮಾಲೀಕ ಭೂಪೇಂದರ್ ಸಿಂಗ್ ದುರಾಸೆಯ ಕಾರಣದಿಂದ ತನ್ನ ಕೆಲಸಗಾರರಾದ ವಿಜಯ್ ಸಿಂಗ್ ರಾಥೋಡ್, ಲಾರಿ ಚಾಲಕರಾದ ದತ್ತು ಹಾಗೂ ಮೌಲಾನ ಎಂಬುವರ ಜತೆ ಸೇರಿ ಎರಡು ಲಾರಿಗಳಲ್ಲಿ ತಿಂಡಿ ಪೆಟ್ಟಿಗೆಗಳನ್ನು ತುಂಬಿಕೊಂಡು ಮದುರೈಗೆ ಹೋಗುವ ಬದಲು ಲಾರಿಗಳನ್ನು ತಮಿಳುನಾಡಿನ ದಿಂಡಿಗಲ್ಲಿಗೆ ತೆಗೆದುಕೊಂಡು ಹೋಗಿದ್ದರು. ಅಲ್ಲಿ ಬಿಸ್ಕೆಟ್ ಪೆಟ್ಟಿಗೆಗಳನ್ನು ಮಾರಾಟ ಮಾಡಲು ಗಿರಾಕಿಗಳನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಲಾರಿಗಳು ಮದುರೈ ತಲುಪದೇ ತಮಿಳುನಾಡಿನ ದಿಂಡಿಗಲ್ಲಿನ ವೇದಸಂದೂರಿಗೆ ಹೋಗಿವೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಆಗ್ನೇಯ ವಿಭಾಗದ ಉಪ ಪೊಲೀಸ್ ಕಮೀಷನರ್ ಪಿ.ಎಸ್.ಹರ್ಷ ಅವರ ಮಾರ್ಗದರ್ಶನದಲ್ಲಿ, ಮಡಿವಾಳ ಉಪವಿಭಾಗದ ಎಸಿಪಿ ಎಚ್.ಸುಬ್ಬಣ್ಣ ಅವರ ನೇತೃತ್ವದಲ್ಲಿ ಪರಪ್ಪನ ಅಗ್ರಹಾರ ಠಾಣೆಯ ಇನ್‌ಸ್ಪೆಕ್ಟರ್ ಎ.ವಿ.ಲಕ್ಷ್ಮಿನಾರಾಯಣ ಹಾಗೂ ಸಿಬ್ಬಂದಿ ತಂಡ ಪ್ರಕರಣವನ್ನು ಬೇಧಿಸಿದ್ದಾರೆ.
ಪ್ರಕರಣದ ಇತರೆ ಆರೋಪಿಗಳಾದ ಭೂಪೇಂದರ್ ಸಿಂಗ್ ಹಾಗೂ ಚಾಲಕ ಮೌಲಾನ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನಾಭರಣ ಕಳವು: ಮನೆಯ ಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಐದು ಸಾವಿರ ನಗದು ಸೇರಿದಂತೆ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮಹದೇವಪುರ ಸಮೀಪದ ಅನುಗ್ರಹ ಲೇಔಟ್‌ನಲ್ಲಿ ನಡೆದಿದೆ.

ಮನೆಯ ಮಾಲೀಕ ಸಚಿನ್ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಅವರು ಜ.28ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೊಂದಿಗೆ ಮಡಿಕೇರಿಗೆ ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹದೇವಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.