ADVERTISEMENT

ಕಟ್ಟಡ ನಿರ್ಮಾಣದಲ್ಲಿ ಭೂಮಿಯ ಸೂಕ್ತ ಬಳಕೆ: ಬಿಡಿಎಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 19:35 IST
Last Updated 15 ಜೂನ್ 2013, 19:35 IST

ಬೆಂಗಳೂರು: `ಬಿಡಿಎ ಸಾರ್ವಜನಿಕರಿಗೆ ಖಾಲಿ ನಿವೇಶನಗಳನ್ನು ನೀಡುವ ಬದಲಾಗಿ ಇರುವ ಭೂಮಿಯನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡು, ಹೆಚ್ಚಿನ ಜನರಿಗೆ ವಸತಿ ಸೌಕರ್ಯ ಕಲ್ಪಿಸಬಹುದಾದ ನಿರ್ಮಾಣದ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಖಾಸಗಿ ಗೃಹ ನಿರ್ಮಾಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಟ್ಟಡಗಳ ನಿರ್ಮಾಣ ಮಾಡುವ ಬಗ್ಗೆ ಬಿಡಿಎ ಚಿಂತನೆ ನಡೆಸಿದರೆ ಸೂಕ್ತ' ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಏರ್ಪಡಿಸಿದ್ದ  `ಗ್ರೀನ್ ಹೋಮ್ಸ 2013' ವಿಷಯ ಕುರಿತ ಸಭೆಯಲ್ಲಿ `ಗ್ರೀನ್ ಬಿಲ್ಡಿಂಗ್ ರೇಟಿಂಗ್ ಸಿಸ್ಟಂ' ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕಟ್ಟಡ ನಿರ್ಮಾಣಕ್ಕೆ ಎ್ಲ್ಲಲಿಯೂ ಭೂಮಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಯೋಜನೆಗಳಿಗಾಗಿ ಕೃಷಿ ಭೂಮಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ರೈತರು ಸಹ ಬೇಸತ್ತು ಹೋಗಿದ್ದಾರೆ. ಇದು ಹೀಗೆ ಮುಂದುವರೆದರೆ ಕೃಷಿ ಮಾಡಲು ಭೂಮಿಯೇ ಉಳಿಯದ ಪರಿಸ್ಥಿತಿ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

`ನಮ್ಮ ದೇಶದಲ್ಲಿ ಮನೆಗಳಿಗೆ ಬೇಡಿಕೆ ಅತಿ ಹೆಚ್ಚಾಗಿದೆ. ಜನರು ಅಮೆರಿಕಾ ಶೈಲಿಯ ಜೀವನಕ್ಕೆ ಹೆಚ್ಚಾಗಿ ಒಗ್ಗುತ್ತಿದ್ದಾರೆ.ಇದು ಪ್ರಕೃತಿಯ ಮೇಲೆ ಕೆಟ್ಟಪರಿಣಾಮ ಬೀರುತ್ತದೆ' ಎಂದರು.

ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರು ಮಾತನಾಡಿ, ಹಸಿರು ಮನೆಗಳ ಸಂಸ್ಕೃತಿ ಬೆಳೆದಂತೆ ನಗರದಲ್ಲಿನ ಸಮಸ್ಯೆ ಹಾಗೂ ಬಿಬಿಎಂಪಿ ಮೇಲಿನ ಹೊರೆ ಕಡಿಮೆಯಾಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ಕಟ್ಟಡ ನಿರ್ಮಾಣ ಸಂಸ್ಥೆಗಳು ಮುಂದೆಬರಬೇಕು ಎಂದು ಹೇಳಿದರು.

ನಗರದಲ್ಲಿ ಹಸಿರು ಮನೆ ನಿರ್ಮಾಣ ಮಾಡುವವರಿಗೆ ಬಿಬಿಎಂಪಿ ಕಡೆಯಿಂದ ಯಾವ ರೀತಿ ಸಹಾಯ ಮಾಡಬಹುದು ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಬರ ಎದುರಿಸುತ್ತಿರುವ ರಾಜ್ಯಗಳಲ್ಲಿ ರಾಜಸ್ಥಾನದ ನಂತರದ ಸ್ಥಾನ ಕರ್ನಾಟಕಕ್ಕೆ ದೊರೆತಿದೆ. ರಾಜ್ಯದ ಜೀವ ನದಿ ಎನಿಸಿಕೊಂಡಿದ್ದ ಕಾವೇರಿ ಸಹ ಈಗ ಜೀವ ನದಿಯಾಗಿ ಉಳಿದಿಲ್ಲ. ಹೀಗಾಗಿ ನೀರಿನ ಪುನರ್‌ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.

ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ಬೆಂಗಳೂರು ವಿಭಾಗದ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಮಾತನಾಡಿ, `ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಂದಾಗಿ ಈಗಿನಿಂದಲೇ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣದ ಮಾದರಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ' ಎಂದು ಸಲಹೆ ನೀಡಿದರು.

ಹಸಿರು ಮನೆ ನಿರ್ಮಾಣದ ಬಗ್ಗೆ ಸಾಮಾನ್ಯ ಜನರನ್ನು ಮಾಧ್ಯಮದ ಮೂಲಕ ಹೇಗೆ ತಲುಪಬಹುದು ಎಂಬ ಬಗ್ಗೆ ಕೆಲ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು. 

ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಡಾ. ಚಂದ್ರಶೇಖರ್ ಹರಿಹರನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.