ADVERTISEMENT

ಕಟ್ಟಾ ಜಗದೀಶ್, ಶ್ರೀನಿವಾಸ್ ಬಂಧನದ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2011, 19:30 IST
Last Updated 26 ನವೆಂಬರ್ 2011, 19:30 IST
ಕಟ್ಟಾ ಜಗದೀಶ್, ಶ್ರೀನಿವಾಸ್ ಬಂಧನದ ಅವಧಿ ವಿಸ್ತರಣೆ
ಕಟ್ಟಾ ಜಗದೀಶ್, ಶ್ರೀನಿವಾಸ್ ಬಂಧನದ ಅವಧಿ ವಿಸ್ತರಣೆ   

ಬೆಂಗಳೂರು: ಕೆಐಎಡಿಬಿ ಭೂ ಹಗರಣದ ಪ್ರಮುಖ ಆರೋಪಿಗಳಾಗಿರುವ ಪಾಲಿಕೆ ಸದಸ್ಯ ಕಟ್ಟಾ ಜಗದೀಶ್ ಮತ್ತು ಇಟಾಸ್ಕಾ ಸಾಫ್ಟ್‌ವೇರ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ಶ್ರೀನಿವಾಸ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಡಿಸೆಂಬರ್ 9ರವರೆಗೆ ವಿಸ್ತರಿಸಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಇಬ್ಬರೂ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಡಿ.2ಕ್ಕೆ ಮುಂದೂಡಿದೆ.
 

ಕಟ್ಟಾ ಗುರುತು ಸಿಗಲಿಲ್ಲ!
ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಶನಿವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದರು. ಅವರ ಚಹರೆಯೇ ಬದಲಾಗಿದ್ದು, ನ್ಯಾಯಾಲಯದಲ್ಲಿದ್ದವರಿಗೆ ಕಟ್ಟಾ ಅವರನ್ನು ಗುರುತು ಹಿಡಿಯಲು ಆಗಲಿಲ್ಲ.

ಮುಖದ ತುಂಬಾ ಬಿಳಿ ಗಡ್ಡ, ತಲೆ ಮೇಲೆ ಟೋಪಿ    (ಮಂಕಿ ಕ್ಯಾಪ್), ಟೀ ಶರ್ಟ್ ಧರಿಸಿದ್ದ ಕಟ್ಟಾ ವಯೋವೃದ್ಧರಂತೆ ಕಾಣುತ್ತಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾದಾಗ ಕಟಕಟೆಯ ಹೊರ ಭಾಗದಲ್ಲಿದ್ದ ವೃದ್ಧರೊಬ್ಬರು ಎದ್ದು ನಿಂತರು.

ಕಟಕಟೆಯ ಒಳಗೆ ಕಟ್ಟಾ ಅವರ ಪುತ್ರ ಜಗದೀಶ್ ಸೇರಿದಂತೆ ಉಳಿದ ಆರೋಪಿಗಳಿದ್ದರು.  ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಗೈರು ಹಾಜರಾಗಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು.

ಮೊದಲನೇ ಆರೋಪಿ ಹಾಜರಾಗಿಲ್ಲವೇ? ಎಂದು ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಕೂಡ ಆರೋಪಿ ಪರ ವಕೀಲರನ್ನು ಪ್ರಶಿಸಿದರು. `ಬಂದಿದ್ದಾರೆ~ ಎಂದು ವಕೀಲರು ಕಟ್ಟಾ ಅವರತ್ತ ಕೈತೋರಿಸಿದಾಗ ಎಲ್ಲರೂ ಅಚ್ಚರಿಗೆ ಒಳಗಾದರು. ವಿಚಾರಣೆ ಮುಗಿದ ಬಳಿಕವೂ ಕಟ್ಟಾ ಸದ್ದಿಲ್ಲದೇ ಹೊರಟುಹೋದರು. ತೀರಾ ಬಳಲಿದಂತೆ ಕಂಡುಬಂದ ಅವರು ಬರುವಾಗ ಮತ್ತು ಹೋಗುವಾಗ ಇಬ್ಬರು ಆಸರೆಯಾಗಿದ್ದರು.


ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಇಬ್ಬರೂ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ತಲೆಮರೆಸಿಕೊಂಡಿರುವ ಜಗ್ಗಯ್ಯ ಮತ್ತು ವೆಂಕಯ್ಯ ಹೊರತುಪಡಿಸಿ ಉಳಿದ ಎಲ್ಲ ಆರೋಪಿಗಳೂ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ಇಬ್ಬರೂ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಡಿ.9ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದರು. ಇದೇ ವೇಳೆ ಇಬ್ಬರೂ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನೂ ನಡೆಸಿದ ಅವರು, ಈ ಕುರಿತ ವಿಚಾರಣೆಯನ್ನು ಡಿ.2ಕ್ಕೆ ಮುಂದೂಡಿದರು.

ಆಕ್ಷೇಪಣೆ ಸಲ್ಲಿಕೆ: ಇಬ್ಬರೂ ಆರೋಪಿಗಳ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಶನಿವಾರ ಆಕ್ಷೇಪಣೆ ಸಲ್ಲಿಸಿದರು. ಲೋಕಾಯುಕ್ತ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಐ.ಎಸ್.ಪ್ರಮೋದ್‌ಚಂದ್ರ ಅವರು ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇಬ್ಬರೂ ಆರೋಪಿಗಳು ಪ್ರಭಾವಿಗಳಾಗಿದ್ದು, ಜಾಮೀನು ನೀಡಿದಲ್ಲಿ ಸಾಕ್ಷ್ಯನಾಶಕ್ಕೆ ಪ್ರಯತ್ನಿಸುವ ಸಂಭವವಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಿದರು.

ಪ್ರತ್ಯೇಕ ಪ್ರಕರಣ: ಪ್ರಕರಣದ ನಾಲ್ಕು ಮತ್ತು ಐದನೇ ಆರೋಪಿಗಳಾಗಿದ್ದ ಜಗ್ಗಯ್ಯ, ವೆಂಕಯ್ಯ ಆರು ತಿಂಗಳಿಗೂ ಹೆಚ್ಚು ಕಾಲದಿಂದ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಬ್ಬರ ವಿರುದ್ಧದ ಆರೋಪಗಳ ಭಾಗವನ್ನು ಆರೋಪಪಟ್ಟಿಯಿಂದ ಬೇರ್ಪಡಿಸಿರುವ ನ್ಯಾಯಾಲಯ, ಅದಕ್ಕೆ ಪ್ರತ್ಯೇಕ ಪ್ರಕರಣ ಸಂಖ್ಯೆ ನೀಡಿದೆ. ಮೂಲ ಪ್ರಕರಣದ ವಿಚಾರಣೆಗೆ ತೊಡಕು ಉಂಟಾಗದಂತೆ ತಡೆಯಲು ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ನ್ಯಾಯಾಧೀಶರು ಶನಿವಾರ ಆದೇಶ ಪ್ರಕಟಿಸಿದರು.

ತಲೆಮರೆಸಿಕೊಂಡಿರುವ ಇಬ್ಬರೂ ಆರೋಪಿಗಳ ವಿರುದ್ಧ ನ್ಯಾಯಾಲಯ ಮತ್ತೊಮ್ಮೆ ಜಾಮೀನುರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಖುದ್ದಾಗಿ ವಾರೆಂಟ್ ಜಾರಿಗೊಳಿಸಿ, ಆರೋಪಿಗಳನ್ನು ಬಂಧಿಸುವಂತೆ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿಯವರಿಗೆ ಆದೇಶಿಸಿದ ನ್ಯಾಯಾಧೀಶರು, ಈ ಪ್ರಕರಣದ ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT