ADVERTISEMENT

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪ್ರಕರಣ: ವೈದ್ಯಕೀಯ ದಾಖಲೆ ಹಾಜರಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಬೆಂಗಳೂರು:  ಕೆಐಎಡಿಬಿ ಭೂ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಕ್ಯಾನ್ಸರ್ ಸೇರಿದಂತೆ ಗಂಭೀರ ಸ್ವರೂಪದ ಕಾಯಿಲೆಗಳು ಇವೆ ಎಂದು ವಾದಿಸುತ್ತಿದ್ದರೂ, ಇದುವರೆಗೆ ಅವರ ಪರ ವಕೀಲರು ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ. 

ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಬಾರದು ಎಂದು ಲೋಕಾಯುಕ್ತ ಪೊಲೀಸರು ವಿಶೇಷ ಕೋರ್ಟ್‌ಗೆ ಶನಿವಾರ  ತಿಳಿಸಿದ್ದಾರೆ.

ಜಾಮೀನು ಅರ್ಜಿಗೆ ಲಿಖಿತ ರೂಪದಲ್ಲಿ ಆಕ್ಷೇಪಣಾ ಹೇಳಿಕೆ ಸಲ್ಲಿಸಿರುವ ಅವರು, ಜಾಮೀನು ನೀಡಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಮುನ್ನ ಹಲವು ಬಾರಿ ವಿಕ್ಟೋರಿಯಾ ಆಸ್ಪತ್ರೆಗೂ ಚಿಕಿತ್ಸೆಗೆಂದು ಕಟ್ಟಾ ಬಂದಿದ್ದಾರೆ. ಆ ವೇಳೆ ಅವರ ಆರೋಗ್ಯದಲ್ಲಿ ಗಂಭೀರ ರೂಪದ ಸಮಸ್ಯೆಗಳು ಇರಲಿಲ್ಲ. ಬಂಧನಕ್ಕೆ ಒಳಗಾದ ತಕ್ಷಣ ಸಮಸ್ಯೆ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೆ ಕಟ್ಟಾ ಪರ ವಕೀಲ ರವಿ ಬಿ. ನಾಯಕ್ ಆಕ್ಷೇಪ ವ್ಯಕ್ತಪಡಿಸಿದರು. ಕಟ್ಟಾ ಅವರಿಗೆ ಕ್ಯಾನ್ಸರ್ ಉಲ್ಭಣಗೊಂಡಿದ್ದು, ಲಂಡನ್‌ನಲ್ಲಿ ಚಿಕಿತ್ಸೆ ಅಗತ್ಯ ಇದೆ ಎಂದರು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸ ಬಯಸಿರುವ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿದರು. ವೈದ್ಯಕೀಯ ದಾಖಲೆಯನ್ನು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಅಂದು  ಹಾಜರುಪಡಿಸುವಂತೆ ಅವರು ಆದೇಶಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.