ADVERTISEMENT

ಕಡಿಮೆಯಾದ ಪಟಾಕಿ ಅಬ್ಬರ: ತಗ್ಗದ ಮಾಲಿನ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST
ಕಡಿಮೆಯಾದ ಪಟಾಕಿ ಅಬ್ಬರ: ತಗ್ಗದ ಮಾಲಿನ್ಯ
ಕಡಿಮೆಯಾದ ಪಟಾಕಿ ಅಬ್ಬರ: ತಗ್ಗದ ಮಾಲಿನ್ಯ   

ಬೆಂಗಳೂರು: ‘ಢಂ..ಢಂ..ಢಂ..’ ಎಂಬ ಕಿವಿಗಡಚಿಕ್ಕುತ್ತಾ ಶಬ್ದ ಮಾಲಿನ್ಯದ ಜತೆಗೆ ವಾಯುಮಾಲಿನ್ಯವನ್ನೂ ಉಂಟು ಮಾಡುವ ಪಟಾಕಿ ಅಬ್ಬರ ಈ ಬಾರಿ ಸಾಕಷ್ಟು ಕಡಿಮೆಯಾಗಿದೆ. ಆದರೆ, ಮಾಲಿನ್ಯ ಪ್ರಮಾಣ ಮಾತ್ರ ಹಾಗೆಯೇ ಇದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚು ಬದಲಾವಣೆಗಳಾಗಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿಅಂಶಗಳ ಪ್ರಕಾರ, ಈ ವರ್ಷ ಶಬ್ದ ಮಾಲಿನ್ಯವು ಐದು ಸ್ಥಳಗಳಲ್ಲಿ ಶೇ 4.3ರಷ್ಟು ಹೆಚ್ಚಾಗಿದ್ದು, ಐದು ಸ್ಥಳಗಳಲ್ಲಿ ಶೇ 5ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ 6 ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಾಗಿತ್ತು.

ಬೆಳಿಗ್ಗೆ ಸಮಯದಲ್ಲಿ ಶಬ್ದ ಮಾಲಿನ್ಯ ಪ್ರಮಾಣ ಪೀಣ್ಯಾದಲ್ಲಿ ಶೇ 3.2, ಚರ್ಚ್‌ ಸ್ಟ್ರೀಟ್‌ ಶೇ 6.8, ಮಾರತ್‌ಹಳ್ಳಿ ಶೇ 1.4, ದೊಮ್ಮಲೂರು ಶೇ 11.3, ಆರ್‌ವಿಸಿಇ ಮೈಸೂರು ರಸ್ತೆ ಶೇ 2.4ರಷ್ಟು  ತಗ್ಗಿದೆ.

ADVERTISEMENT

ಆದರೆ, ರಾತ್ರಿ ವೇಳೆ ಎಲ್ಲಾ 10 ಕಡೆಗಳಲ್ಲೂ ಶಬ್ದ ಮಾಲಿನ್ಯ ಹೆಚ್ಚಾಗಿದೆ. ವೈಟ್‌ಫೀಲ್ಡ್‌ನಲ್ಲಿ ಶೇ 1.6ರಷ್ಟು, ಪೀಣ್ಯದಲ್ಲಿ ಶೇ 0.5ರಷ್ಟು, ಯಶವಂತಪುರದಲ್ಲಿ ಶೇ 1.3ರಷ್ಟು, ಬಿಟಿಎಂ ಲೇಔಟ್‌ನಲ್ಲಿ ಶೇ 0.6ರಷ್ಟು, ಆರ್‌ವಿಸಿಇ ಮೈಸೂರು ರಸ್ತೆ ಶೇ 0.4ರಷ್ಟು ಕಡಿಮೆಯಾಗಿದೆ. ಚರ್ಚ್‌ ಸ್ಟ್ರೀಟ್‌ ಶೇ 3.5, ಮಾರತ್‌ಹಳ್ಳಿ ಶೇ 5.4, ನಿಸರ್ಗ ಭವನ (ಎಸ್‌.ಜಿ.ಹಳ್ಳಿ) ಶೇ 35, ದೊಮ್ಮಲೂರು ಶೇ 17.9, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಶೇ 3ರಷ್ಟು ಹೆಚ್ಚಳವಾಗಿರುವುದು ದಾಖಲಾಗಿದೆ.

ವಸತಿ ಪ್ರದೇಶವಾದ ಬಸವೇಶ್ವರ ನಗರ ಹಾಗೂ ಬಿಟಿಎಂ ಬಡಾವಣೆಗಳಲ್ಲಿ ಶಬ್ದ ಮಾಲಿನ್ಯ ಹೆಚ್ಚಾಗಿದೆ. ಅಲ್ಲದೆ, ಸೂಕ್ಷ ಪ್ರದೇಶವಾದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಬಳಿ ಶಬ್ದ ಮಾಲಿನ್ಯ ಕಳೆದ ವರ್ಷಕ್ಕಿಂತ ಸಾಕಷ್ಟು ಹೆಚ್ಚಾಗಿದೆ. ಕಳೆದ ವರ್ಷ ರಾತ್ರಿ ವೇಳೆ ಶೇ 6.8ರಷ್ಟಿದ್ದ ಶಬ್ದ ಮಾಲಿನ್ಯ ಈ ಬಾರಿ ಶೇ 15.5ರಷ್ಟಾಗಿದೆ.

‘ನಗರದ 10 ಭಾಗಗಳಲ್ಲಿ ನಡೆಸಿದ ಶಬ್ದ ಮಾಲಿನ್ಯದ ಸಮೀಕ್ಷೆ ಪ್ರಕಾರ, ಬೆಳಿಗ್ಗೆ 5 ಭಾಗಗಳಲ್ಲಿ ಮಾಲಿನ್ಯ ತಗ್ಗಿದೆ. ರಾತ್ರಿ ಹತ್ತೂ ಪ್ರದೇಶಗಳಲ್ಲೂ ಮಾಲಿನ್ಯ ಹೆಚ್ಚಾಗಿದೆ. ಸೂಕ್ಷ್ಮ ಪ್ರದೇಶವಾದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಬಳಿ ಈ ಬಾರಿ ಶಬ್ದ ಮಾಲಿನ್ಯ ಹೆಚ್ಚಾಗಿದೆ. ಇದು ಕೇವಲ ಪಟಾಕಿಯಿಂದ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ಹೇಳಿದರು.

‘ಪಟಾಕಿ ಬಳಸಬೇಡಿ ಎಂದು ಮಂಡಳಿ ರಾಜ್ಯದ ಮೂರು ಸಾವಿರಕ್ಕೂ ಹೆಚ್ಚಿನ ಶಾಲೆಗಳಿಗೆ ಹೋಗಿ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಮಾಡಿಸಿತ್ತು. ಇದರಿಂದ ಮಾಲಿನ್ಯ ಹೆಚ್ಚಾಗಿಲ್ಲ’ ಎಂದರು.

ಪಟಾಕಿ ಗಾಯಾಳುಗಳ ಸಂಖ್ಯೆ ಇಳಿಕೆ:
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ ಕಡಿಮೆಯಾಗಿದೆ. ಜನರಲ್ಲಿ ಜಾಗೃತಿ ಮೂಡಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ವೈದ್ಯರು.

ಕಳೆದ ವರ್ಷ ದೀಪಾವಳಿ ಹಬ್ಬದ ಮೂರು ದಿನಗಳಲ್ಲಿ ಗಾಯಗೊಂಡವರ ಸಂಖ್ಯೆ 100ರ ಗಡಿ ದಾಟಿತ್ತು. ಈ ಬಾರಿ ಸುಮಾರು 70 ಮಂದಿ ಪಟಾಕಿ ಅನಾಹುತಕ್ಕೆ ಒಳಗಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ೈಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.