ADVERTISEMENT

ಕನ್ನಡ ಉಳಿಸಿ ವರ್ಷ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಬೆಂಗಳೂರು: ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು `ಕನ್ನಡ ಉಳಿಸಿ~ ವರ್ಷವನ್ನಾಗಿ ಆಚರಿಸಲು ಮುಂದಾಗಿರುವ ಕರ್ನಾಟಕ ರಾಜ್ಯೋತ್ಸವ ಸಮಿತಿಯು ವರ್ಷವಿಡೀ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಚಿಂತನೆ ನಡೆಸಿದೆ.

`1962ರಿಂದ ಸತತವಾಗಿ 49 ವರ್ಷ ಕಾಲ ಮೈಸೂರು ಬ್ಯಾಂಕ್ ವೃತ್ತದಲ್ಲಿ  ರಾಜ್ಯೋತ್ಸವ ಆಚರಿಸಲಾಗುತ್ತಿದೆ. ರಾಜ್ಯಕ್ಕೆ ಕರ್ನಾಟಕ ಎಂಬುದಾಗಿ ಮರುನಾಮಕರಣ ಮಾಡುವ ಮುಂಚಿನಿಂದಲೂ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಬಾರಿಯೂ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಗುವುದು~ ಎಂದು ಸಮಿತಿ ಅಧ್ಯಕ್ಷರಾದ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`1956ರಿಂದ ಈವರೆಗೆ ಆಡಳಿತ ನಡೆಸಿರುವ ಸರ್ಕಾರಗಳು ಗಡಿನಾಡಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಬಿಜೆಪಿ ಸರ್ಕಾರ ಈಗಲಾದರೂ ಗಡಿ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಬೇಕು. ಮುಂದಿನ ಆಯವ್ಯಯದಲ್ಲಿ ಗಡಿ ಭಾಗದ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 5,000 ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು~ ಎಂದು ಆಗ್ರಹಿಸಿದರು.

`ಹೊರನಾಡಿನಲ್ಲಿ ಎರಡೂವರೆ ಕೋಟಿಗೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಈ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಹೊರ ನಾಡಿನಲ್ಲಿ ನೆಲೆಸಿರುವ ಕನ್ನಡಿಗರ ಅಭಿವೃದ್ಧಿಗೆ, ಶಾಲೆಗಳ ನಿರ್ಮಾಣ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡಲು 500 ಕೋಟಿ ರೂಪಾಯಿ ಕಾಯ್ದಿರಿಸಬೇಕು~ ಎಂದು ಒತ್ತಾಯಿಸಿದರು.

`ಮಹಾಜನ್ ವರದಿ ಪ್ರಕಾರ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಿದ್ದು, ಸರ್ಕಾರ ಇತ್ತ ಗಮನ ಹರಿಸಬೇಕು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಹೋರಾಟ ನಡೆಸುತ್ತಿರುವ ಕಯ್ಯಾರ ಕಿಞಣ್ಣ ರೈ ಅವರಿಗೆ ಸರ್ಕಾರ ವಿಶೇಷ ಗೌರವ ಸಲ್ಲಿಸಬೇಕು~ ಎಂದು ವಾಟಾಳ್ ನಾಗರಾಜ್ ಹೇಳಿದರು.

`ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಡಿಸೆಂಬರ್‌ನಲ್ಲಿ ಬೀದರ್‌ನಿಂದ ಚಳವಳಿ ಆರಂಭಿಸಲಾಗುವುದು. ನವೆಂಬರ್ ಒಂದರಂದು ಮೈಸೂರು ಬ್ಯಾಂಕ್ ಹತ್ತಿರದ ನೃಪತುಂಗ ಮಂಟಪದಲ್ಲಿ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.