ADVERTISEMENT

ಕನ್ನಡ ಪ್ರೇಮ: ಇಂಗ್ಲಿಷ್ ಜ್ಞಾನವೂ ಇರಲಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST
ಕನ್ನಡ ಪ್ರೇಮ: ಇಂಗ್ಲಿಷ್ ಜ್ಞಾನವೂ ಇರಲಿ
ಕನ್ನಡ ಪ್ರೇಮ: ಇಂಗ್ಲಿಷ್ ಜ್ಞಾನವೂ ಇರಲಿ   

ಬೆಂಗಳೂರು: `ಕನ್ನಡ ಭಾಷಾ ಪ್ರೇಮದ ಜೊತೆಗೆ ಇಂಗ್ಲಿಷ್ ಭಾಷೆಯ ಜ್ಞಾನವೂ ಇಂದಿನ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ~ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಕೆ.ಎಲ್.ಇ ಸಂಸ್ಥೆಯ ಎಸ್.ನಿಜಲಿಂಗಪ್ಪ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಜಗತ್ತಿನಲ್ಲಿ ಇಂದು ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣಗಳ ಕಾರಣದಿಂದ ಇಂಗ್ಲಿಷ್ ಭಾಷೆ ವ್ಯವಹಾರಿಕ ಭಾಷೆಯಾಗಿ ಬೆಳೆದಿದೆ. ಜಗತ್ತಿನಾದ್ಯಂತ ಬಳಕೆಯಾಗುತ್ತಿರುವ ಪ್ರಭಾವಶಾಲಿ ಭಾಷೆಯಾಗಿರುವುದರಿಂದ ಇಂದಿನ ಮಕ್ಕಳಿಗೆ ಇಂಗ್ಲಿಷ್ ಭಾಷಾ ಜ್ಞಾನವನ್ನು ನೀಡಬೇಕಾಗಿರುವುದು ಅನಿವಾರ್ಯವಾಗಿದೆ. ಹೀಗಾಗಿ ಇಂಗ್ಲಿಷ್ ಭಾಷೆಯನ್ನು ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ~ ಎಂದು ಅವರು ನುಡಿದರು.

ಇಂಗ್ಲಿಷ್ ಭಾಷಾ ಜ್ಞಾನದ ಕಲಿಕೆ ಎಂದರೆ ಕನ್ನಡವನ್ನು ವಿರೋಧಿಸುವುದು ಎಂದಲ್ಲ. ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಮಾತೃ ಭಾಷೆಯ ಪಾತ್ರ ಮುಖ್ಯವಾದುದು ಎಂದರು. ಜಗತ್ತಿನ ಅನೇಕ ಪ್ರಾದೇಶಿಕ ಭಾಷೆಗಳು ಹಾಗೂ ಭಾರತೀಯ ಭಾಷೆಗಳು ಇಂದು ಇಂಗ್ಲಿಷ್ ಭಾಷೆಯಿಂದಾಗಿ ಗಂಡಾಂತರವನ್ನು ಎದುರಿಸುತ್ತಿವೆ. ಹೀಗಾಗಿ ಇಂಗ್ಲಿಷ್ ಅನ್ನು ಕಲಿತೇ ಅದನ್ನು ಎದುರಿಸಬೇಕು ಎಂದರು.

ಸಮಾರಂಭದಲ್ಲಿ  ಪ್ರಾಂಶುಪಾಲ ಡಾ.ಜೆ.ಎಂ.ಮಲ್ಲಿಕಾರ್ಜುನಯ್ಯ ಮತ್ತಿತರರು  ಇದ್ದರು.ಈ ಸಂದರ್ಭದಲ್ಲಿ  ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.