ADVERTISEMENT

ಕನ್ನಡ ಮನಸ್ಸುಗಳು ಒಪ್ಪುವ ಸಿನಿಮಾ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 19:45 IST
Last Updated 19 ಫೆಬ್ರುವರಿ 2011, 19:45 IST

ಬೆಂಗಳೂರು: ‘ಹಿಂದಿ ತೆಲುಗು ತಮಿಳು ಚಿತ್ರರಂಗ ಹೇಗೆ ಸಿನಿಮಾಗಳನ್ನು ನಿರ್ಮಿಸುತ್ತದೆಯೋ ಹಾಗೆ ಕನ್ನಡದ ಸಿನಿಮಾಗಳನ್ನು ನಿರ್ಮಿಸಬೇಕು ಎಂಬ ಹಪಹಪಿ ಅಗತ್ಯವಿಲ್ಲ.ಕನ್ನಡದ ಮನಸ್ಸುಗಳು ಒಪ್ಪುವ ಚಲನಚಿತ್ರ ನಿರ್ಮಾಣವಾಗಬೇಕಿದೆ’ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಎಸ್.ಪಿ.ವರದರಾಜು ಆತ್ಮೀಯರ ಬಳಗ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಎಸ್.ಪಿ.ವರದರಾಜು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಹಿರಿಯ ನಟಿ ರೇವತಿ ಕಲ್ಯಾಣಕುಮಾರ್ ಹಾಗೂ ನಾಟಕಕಾರ ಲಾಲ್ ಅಹಮದ್ ಬಂದೇನವಾಜ ಖಲೀಫ ಅಲ್ದಾಳ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ದುರದೃಷ್ಟವಶಾತ್ ಕನ್ನಡದಲ್ಲಿ ಮನಸ್ಸು ಮುಟ್ಟುವ ಚಿತ್ರಗಳಿಗಿಂತಲೂ ‘ಮೈ ಮುಟ್ಟುವ’ ಚಿತ್ರಗಳೇ ಹೆಚ್ಚಾಗಿ ಮೂಡಿ ಬರುತ್ತಿವೆ. ಕಥೆ ಇಲ್ಲದೆಯೂ ಸಿನಿಮಾ ನಿರ್ಮಿಸಬಹುದು ಎಂಬ ಹುಸಿಕಲ್ಪನೆ ಚಿತ್ರ ತಯಾರಕರಲ್ಲಿದೆ. ಕಥೆ ಕಟ್ಟುವ ಕ್ರಮ ತಿಳಿಯದೇ ಹೋದರೆ ಜನಮನದಲ್ಲಿ ಉಳಿಯುವಂತಹ ಚಿತ್ರಗಳನ್ನು ನಿರ್ಮಿಸುವುದು ಸಾಧ್ಯವಿಲ್ಲ’ ಎಂದರು.

‘ಡಾ. ರಾಜ್ ಹಾಗೂ ಅವರ ಕಿರಿಯ ಸಹೋದರ ವರದರಾಜು ಕನ್ನಡ ಚಿತ್ರರಂಗದ 50 ವರ್ಷಗಳ ಬೆಳವಣಿಗೆಗೆ ನೀಡಿದ ಕೊಡುಗೆ ದೊಡ್ಡದು. ರಾಜ್ ಅವರ ವೃತ್ತಿ ಜೀವನವನ್ನು ರೂಪಿಸಿದವರು ವರದಣ್ಣ. ರಾಜ್ ಚಿತ್ರರಂಗದ ಸಾಕ್ಷಿಪ್ರಜ್ಞೆಯಾದರೆ ವರದಣ್ಣ ರಾಜ್ ಅವರ ಅಂತರಂಗದ ಸಾಕ್ಷಿಪ್ರಜ್ಞೆಯಾಗಿದ್ದರು. ಸಾಮಾಜಿಕ ವಿವೇಕದಿಂದ ಚಿತ್ರಗಳನ್ನು ನಿರ್ಮಿಸುತ್ತಿದ್ದರು’ ಎಂದು ಹೇಳಿದರು.

ನಟ ಶಿವರಾಜ್ ಕುಮಾರ್ ಮಾತನಾಡಿ ‘ಬಾಲ್ಯದ ತುಂಟತನಗಳನ್ನು ಕ್ಷಮಿಸಿ ನಮ್ಮನ್ನು ಚಿಕ್ಕಪ್ಪ ವರದರಾಜು ಬೆಳೆಸಿದರು. ನನ್ನ ಚಿತ್ರಗಳ ಕಥೆಗಳನ್ನು ಆಸಕ್ತಿಯಿಂದ ಓದುತ್ತಿದ್ದರು. ಡಾ.ರಾಜ್ ಹಾಗೂ ವರದರಾಜು ಅವರು ನನ್ನ ಎರಡು ಕಣ್ಣುಗಳಿದ್ದಂತೆ’ ಎಂದು ಹೇಳಿದರು.

ನಟ ಲೋಕನಾಥ್ ಮಾತನಾಡಿ ‘ವರದರಾಜು ಅವರಿಗೆ ಜನರ ಅಭಿರುಚಿ ಏನು ಎಂಬುದು ತಿಳಿದಿತ್ತು. ಅದನ್ನು ಅರಿತು ಅವರು ಚಿತ್ರ ನಿರ್ಮಿಸುತ್ತಿದ್ದರು. ಈಗ ಕೂಡ ಜನರ ಮನಸ್ಸನ್ನು ಅರಿತು ಚಿತ್ರಗಳು ನಿರ್ಮಾಣಗೊಳ್ಳಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.