ADVERTISEMENT

ಕಪ್ಪತ್ತಗುಡ್ಡ: ವನ್ಯಜೀವಿಧಾಮ ಘೋಷಣೆ ಬೇಡ

ಅಖಿಲ ಭಾರತ ಬಂಜಾರ ಸೇವಾ ಸಂಘದ ಗದಗ ತಾಲ್ಲೂಕು ಘಟಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST
ಅಖಿಲ ಭಾರತ ಬಂಜಾರ ಸೇವಾ ಸಂಘದ ಗದಗ ತಾಲ್ಲೂಕು ಘಟಕವು ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವನ್ನಾಗಿ ಘೋಷಿಸಬಾರದು ಎಂದು ಒತ್ತಾಯಿಸಿ ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಲಂಬಾಣಿ ಮಹಿಳೆಯರು ನೃತ್ಯ ಪ್ರದರ್ಶಿಸಿದರು                                                                    -ಪ್ರಜಾವಾಣಿ ಚಿತ್ರ
ಅಖಿಲ ಭಾರತ ಬಂಜಾರ ಸೇವಾ ಸಂಘದ ಗದಗ ತಾಲ್ಲೂಕು ಘಟಕವು ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವನ್ನಾಗಿ ಘೋಷಿಸಬಾರದು ಎಂದು ಒತ್ತಾಯಿಸಿ ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಲಂಬಾಣಿ ಮಹಿಳೆಯರು ನೃತ್ಯ ಪ್ರದರ್ಶಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: `ಗದಗ ಜಿಲ್ಲೆಯ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವನ್ನಾಗಿ ಘೋಷಿಸಬಾರದು' ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ಗದಗ ತಾಲ್ಲೂಕು ಘಟಕದ ಅಧ್ಯಕ್ಷ ಮೋತಿಲಾಲ ಚನ್ನಪ್ಪ ಮಾಳಗಿಮನಿ ಮನವಿ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪತ್ತಗುಡ್ಡದಲ್ಲಿನ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳನ್ನು ರಕ್ಷಿಸುವ ನೆಪದಲ್ಲಿ ಕಪ್ಪತ್ತಗುಡ್ಡವನ್ನು ಆಶ್ರಯಿಸಿರುವ ಸುತ್ತಮುತ್ತಲಿನ 33ಕ್ಕೂ ಹೆಚ್ಚಿನ ಗ್ರಾಮಗಳ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

ಈ ಭಾಗದ ದಲಿತರು, ಕುರುಬರು, ಅಲ್ಪಸಂಖ್ಯಾತರು, ಲಂಬಾಣಿಗಳು, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲಾ ಸಮುದಾಯಗಳ ಜನರು ಕೃಷಿ ಚಟುವಟಿಕೆ, ಜಾನುವಾರುಗಳ ಮೇವಿಗಾಗಿ ಕಪ್ಪತ್ತಗುಡ್ಡವನ್ನು ಅವಲಂಬಿಸಿದ್ದಾರೆ. ವನ್ಯಜೀವಿಧಾಮ ಘೋಷಣೆಯಾದರೆ ಕಪ್ಪತ್ತಗುಡ್ಡವನ್ನು ಆಶ್ರಯಿಸಿರುವ ಕುಟುಂಬಗಳು ಬೀದಿಗೆ ಬರಲಿವೆ ಎಂದರು.

ಕಪ್ಪತಗುಡ್ಡದಲ್ಲಿ 60-70ರ ದಶಕದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಕಳ್ಳಬಟ್ಟಿ ವ್ಯವಹಾರವನ್ನು ನಿಯಂತ್ರಿಸುವ ಉದ್ದೇಶದಿಂದ 1979ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಈ ಭಾಗದ ಜನರಿಗೆ ಪಟ್ಟಾ ನೀಡಿ ಸಾಗುವಳಿಗೆ ಹಚ್ಚಿದ್ದರು. ಅಂದಿನಿಂದ ನಿರಂತರವಾಗಿ ಇಲ್ಲಿನ ಜನರು ಭೂಮಿಯ ಸಾಗುವಳಿಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಉಂಟಾದ ತೀವ್ರ ಬರಗಾಲದಿಂದ ಇಲ್ಲಿನ ಕೂಲಿ ಕಾರ್ಮಿಕರು, ಬಡ ಜನರು ಕಂಗಾಲಾಗಿದ್ದಾರೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಕುಡಿಯುವ ನೀರಿಗೂ ತತ್ವಾರ ಪಡುವಂತಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವ ಬದಲು ವನ್ಯಜೀವಿಧಾಮದ ಘೋಷಣೆ ಮಾಡಲು ಹೊರಟಿರುವ ಸರ್ಕಾರದ ಧೋರಣೆ ಖಂಡನೀಯ ಎಂದರು. ಈ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡದಿದ್ದರೆ ಅಮರಣಾಂತ ಉಪವಾಸ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವೇದಿಕೆಯ ಸಂಚಾಲಕರಾದ ಲಕ್ಷ್ಮಣ ಚವ್ಹಾಣ, ಬಸವರಾಜು ಚಿಕ್ಕಪ್ಪನವರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.