ADVERTISEMENT

ಕಮಲ ಮುಡಿದವರು ಹಲವರು ‘ಕೈ’ ಹಿಡಿದವರು ಕೆಲವರು

​ಪ್ರಜಾವಾಣಿ ವಾರ್ತೆ
Published 15 ಮೇ 2018, 19:30 IST
Last Updated 15 ಮೇ 2018, 19:30 IST
ವಿ.ಸೋಮಣ್ಣ
ವಿ.ಸೋಮಣ್ಣ   

ಬೆಂಗಳೂರು: ಬೆಂಗಳೂರು ದಕ್ಷಿಣದಲ್ಲಿನ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕಡೆ ಕಮಲ ಅರಳಿದ್ದು, ಇನ್ನೆರಡು ಕ್ಷೇತ್ರಗಳಲ್ಲಿ ಮತದಾರರು ‘ಕೈ’ ಹಿಡಿದಿದ್ದಾರೆ.

ಕಾಂಗ್ರೆಸ್‌ನಲ್ಲಿದ್ದ ವಿ.ಸೋಮಣ್ಣ 2009ರಲ್ಲಿ ಅಪರೇಷನ್‌ ಕಮಲದಿಂದ ಬಿಜೆಪಿ ಸೇರಿದ್ದರು. ಆಗ ಗೋವಿಂದರಾಜನಗರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿ ಸ್ಪರ್ಧಿಸಿದ್ದ ಪ್ರಿಯಕೃಷ್ಣ ಎದುರು ಸೋತಿದ್ದರು. 2013ರಲ್ಲಿ ಕ್ಷೇತ್ರ ಬದಲಿಸಿ ಪ್ರಿಯಕೃಷ್ಣ ತಂದೆ ಎಂ.ಕೃಷ್ಣಪ್ಪ ಎದುರು ವಿಜಯನಗರದಿಂದ ಸ್ಪರ್ಧಿಸಿ ಅಲ್ಲಿಯೂ ಸೋಲುಂಡರು. ಈ ಬಾರಿ ಮತ್ತೆ ಗೋವಿಂದರಾಜ ನಗರಕ್ಕೆ ಹಿಂದಿರುಗಿದ ಸೋಮಣ್ಣ, ಮುದುಡಿದ್ದ ತಾವರೆಯನ್ನು ಅರಳಿಸಿದ್ದಾರೆ. 2013ರಲ್ಲಿ ಪ್ರಿಯಕೃಷ್ಣ ಮತ್ತು ಎಂ.ಕೃಷ್ಣಪ್ಪಕ್ಕೆ ಎದುರಾಗಿ ನಿಂತಿದ್ದ ಬಿಜೆಪಿ ಅಭ್ಯರ್ಥಿಗಳು ಈ ಬಾರಿ ಕ್ಷೇತ್ರ ಅದಲು ಬದಲು ಮಾಡಿಕೊಂಡಿದ್ದು, ಬಿಜೆಪಿಗೆ ಲಾಭವಾಗಿ ಪರಿಣಮಿಸಿದೆ.

ವಿಜಯನಗರ ಕ್ಷೇತ್ರದಿಂದ ಎರಡು ಬಾರಿ ಗೆಲುವು ಕಂಡಿದ್ದ ಎಂ.ಕೃಷ್ಣಪ್ಪ ಈ ಬಾರಿ ಎಚ್‌.ರವೀಂದ್ರ ಅವರ ಎದುರು ಪ್ರಯಾಸದ ಗೆಲುವು ಸಾಧಿಸಿ, ಹ್ಯಾಟ್ರಿಕ್‌ ಹೀರೊ ಆಗಿದ್ದಾರೆ. 10ನೇ ಸುತ್ತಿನ ಎಣಿಕೆವರೆಗೂ ಎಚ್.ರವೀಂದ್ರ ಮುನ್ನಡೆ ಕಾಯ್ದುಕೊಂಡಿದ್ದರು. ಆ ನಂತರ ನಿಧಾನಕ್ಕೆ ಮುನ್ನಡೆಗೆ ಬಂದ ಕೃಷ್ಣಪ್ಪ ಫಲಿತಾಂಶ ಘೋಷಣೆಯಾದ ಕೂಡಲೇ ನಿಟ್ಟುಸಿರುಬಿಟ್ಟರು.

ADVERTISEMENT

ಬಿಜೆಪಿ ಭದ್ರಕೋಟೆ ಎನಿಸಿದ ಪದ್ಮನಾಭನಗರ ಕ್ಷೇತ್ರದಲ್ಲಿ ಸತತ ಆರನೇ ಬಾರಿ ಗೆಲುವು ಸಾಧಿಸುವ ಮೂಲಕ ಆರ್‌.ಅಶೋಕ್‌ ಡಬಲ್‌ ಹ್ಯಾಟ್ರಿಕ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮತ ಎಣಿಕೆಯಲ್ಲಿ ಮೊದಲಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಅಶೋಕ್‌, ಜೆಡಿಎಸ್‌ನ ವಿ.ಕೆ.ಗೋಪಾಲ್‌ ಎದುರು ಬಹುಬೇಗನೆ ಗೆಲುವಿನ ನಗೆ ಬೀರಿದರು.

ಬ್ರಾಹ್ಮಣರೇ ಹೆಚ್ಚಿರುವ ಬಸವನಗುಡಿ ಕ್ಷೇತ್ರವನ್ನು ಬಿಜೆಪಿ ಬಹುಬೇಗ ತನ್ನತ್ತ ಸೆಳೆದುಕೊಂಡಿತು. ಬಿಜೆಪಿಯಿಂದ ಎರಡು ಬಾರಿ ಆಯ್ಕೆಯಾಗಿದ್ದ ರವಿಸುಬ್ರಹ್ಮಣ್ಯ ಈ ಬಾರಿಯೂ ಗೆಲುವಿನ ನಗೆ ಬೀರಿದ್ದಾರೆ. ಜೆಡಿಎಸ್‌ನ ಕೆ.ಬಾಗೇಗೌಡ ಅವರು, ರವಿ ಸುಬ್ರಹ್ಮಣ್ಯ ಪಡೆದಿರುವ ಮತಗಳಿಗೆ ಸರಿಯಾಗಿ ಅರ್ಧದಷ್ಟು ಮತಗಳನ್ನಷ್ಟೇ ಪಡೆದಿದ್ದಾರೆ.

ಗೆಲುವಿನ ಕುದುರೆ ಮೇಲೆ ಕುಳಿತಿರುವ ರಾಮಲಿಂಗಾರೆಡ್ಡಿಯ ನಾಗಾಲೋಟ ಹಾಗೆಯೇ ಮುಂದುವರಿದಿದೆ.

ಬಿಜೆಪಿಯ ಲಲ್ಲೇಶ್ ರೆಡ್ಡಿ ಎದುರು ದೊಡ್ಡ ಅಂತರದ ಗೆಲುವು ಪಡೆದು, ಏಳನೇ ಬಾರಿ ಗೆಲುವಿನ ಮುಕುಟಮಣಿ ಧರಿಸಿದ್ದಾರೆ.

ಬೊಮ್ಮನಹಳ್ಳಿಯಲ್ಲಿ ಈ ಬಾರಿಯೂ ಕಮಲದ ಘಮಲು ಪಸರಿಸಿದೆ. ಈಗಾಗಲೇ ಎರಡು ಬಾರಿ ಮತದಾರ ಆಶೀರ್ವಾದ ಪಡೆದಿದ್ದ ಸತೀಶ್‌ ರೆಡ್ಡಿ, ಕಾಂಗ್ರೆಸ್‌ನ ಸುಷ್ಮಾ ರಾಜಗೋಪಾಲ ರೆಡ್ಡಿ ಎದುರು ಭಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಶೂರರೆನಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.