ADVERTISEMENT

ಕರುನಾಡ ಸುವರ್ಣ ವೇದಿಕೆ ಅಧ್ಯಕ್ಷ ಸೇರಿ 11 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ವಿ.ವಿರೇಶ್
ವಿ.ವಿರೇಶ್   

ಬೆಂಗಳೂರು: ಚಪ್ಪಲಿ ಮಾರಾಟ ಮಳಿಗೆಯ ವ್ಯವಸ್ಥಾಪಕರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದಡಿ ಕರುನಾಡ ಸುವರ್ಣ ವೇದಿಕೆಯ ಅಧ್ಯಕ್ಷ ಸೇರಿ 11 ಮಂದಿಯನ್ನು ಜೆ.ಪಿ.ನಗರದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ವೇದಿಕೆಯ ಅಧ್ಯಕ್ಷ ವಿ.ವೀರೇಶ್ (30), ಕಾರ್ಯಕರ್ತರಾದ ರಘು (36), ಸಿ.ಪಿ.ರಘು (35), ಚಂದ್ರಶೇಖರ್ (35), ಪಿ.ಸುಂದರ್ (56), ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ನಾಗರಾಜ್ (45), ಕಾರ್ಯಕರ್ತರಾದ ಹರಿಪ್ರಸಾದ್ (20), ಹರೀಶ್ ಕುಮಾರ್ (24), ಶಂಕರ್ (51), ಕೃಷ್ಣಪ್ಪ ಹಾಗೂ ಜಿ.ಎ.ಸಿದ್ದಲಿಂಗಯ್ಯ (22) ಬಂಧಿತರು.

ಕರ್ನಾಟಕ ಕಾರ್ಮಿಕರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಚ್.ಬಿ.ನಾಗರಾಜ್ ಹಾಗೂ ನಗರ ಘಟಕದ ಅಧ್ಯಕ್ಷ ಸಿ.ಟಿ.ಪ್ರದೀಪ್ ನಾಯ್ಕ್ ಎಂಬುವರು ತಲೆ
ಮರೆಸಿಕೊಂಡಿದ್ದಾರೆ.

ADVERTISEMENT

ಕೆಲ ದಿನಗಳ ಹಿಂದೆ ಜೆ.ಪಿ.ನಗರದ 24ನೇ ಮುಖ್ಯರಸ್ತೆಯ ಚಪ್ಪಲಿ ಮಳಿಗೆಗೆ ನುಗ್ಗಿದ್ದ ಆರೋಪಿಗಳು, ‘ಕರ್ನಾಟಕದ  ಬಾವುಟದ ಬಣ್ಣ ಹಳದಿ. ಅದೇ ಬಣ್ಣದ ಚಪ್ಪಲಿಗಳನ್ನು ಮಾರಾಟ ಮಾಡಿ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದೀರಾ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದರು’ ಎಂದು ಜೆ.ಪಿ.ನಗರ ಪೊಲೀಸರು ತಿಳಿಸಿದರು.

‘ಪ್ರತಿಭಟನೆ ನಡೆಸದಿರಲು ₹5 ಲಕ್ಷ ನೀಡುವಂತೆ ಬೇಡಿಕೆ ಸಹ ಇಟ್ಟಿದ್ದರು. ಆ ಬಗ್ಗೆ ಮಳಿಗೆಯ ವ್ಯವಸ್ಥಾಪಕರು ದೂರು ಕೊಟ್ಟಿದ್ದರು’.

‘ಮರುದಿನ ಹಣ ಪಡೆಯಲು ಮಳಿಗೆಗೆ ಬಂದಿದ್ದ ಆರೋಪಿಗಳು, ₹5 ಲಕ್ಷದ ಬದಲಿಗೆ ₹ 1 ಲಕ್ಷ ನೀಡಿ ಎಂದು ವ್ಯವಸ್ಥಾಪಕರನ್ನು ಕೇಳಿದ್ದರು. ಅದೇ ವೇಳೆ ಮಳಿಗೆಯಲ್ಲಿ ಗ್ರಾಹಕರ ವೇಷದಲ್ಲಿ ಕುಳಿತಿದ್ದ ಪೊಲೀಸರು,  ಆರೋಪಿಗಳನ್ನು ಬಂಧಿಸಿದರು’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.