ADVERTISEMENT

ಕರ್ನಾಟಕ ಕ್ಲಸ್ಟರ್ ಮೀಟ್ 2012 ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಬೆಂಗಳೂರು:  `ಕೈಗಾರಿಕೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುವ ಅನುದಾನ ಮತ್ತು ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು~ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಎಂ.ಮಹೇಶ್ವರರಾವ್ ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ರಾಜ್ಯ ತಾಂತ್ರಿಕ ಉನ್ನತೀಕರಣ ಪರಿಷತ್, ಸಣ್ಣ-ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆಯು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ `ಕರ್ನಾಟಕ ಕ್ಲಸ್ಟರ್ ಮೀಟ್ 2012~ ಉದ್ಘಾಟಿಸಿ ಅವರು ಮಾತನಾಡಿದರು.

`ಸ್ಫರ್ಧೆಯ ವಾತಾವರಣ ನಿರ್ಮಾಣ ಮಾಡುವುದರಿಂದ ಅನುಕೂಲವಾಗಲಿದೆ. ಸ್ಫರ್ಧಾತ್ಮಕ ಕೈಗಾರಿಕಾ ಕ್ಲಸ್ಟರ್ ನಿರ್ಮಿಸುವ ಮೂಲಕ ಹೆಚ್ಚು ಕೈಗಾರಿಕೆಗಳನ್ನು ಸೆಳೆಯಬಹುದು. ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು ಹೆಚ್ಚು ಮಾಡಲು ಅಭಿವೃದ್ಧಿ ದರವನ್ನು ಎರಡಂಕಿಗೆ ಏರಿಸಬೇಕು. ಹೀಗೆ ಮಾಡಿದಾಗ ತಲಾ ಆದಾಯವನ್ನೂ ಏರಿಸಬಹುದು~ ಎಂದರು.

`ಕೈಗಾರಿಕೆಗಳು ನೂತನ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಮತ್ತು ಸ್ಫರ್ಧಾತ್ಮಕತೆ ಬೆಳೆಸಿಕೊಳ್ಳಬೇಕು. ಇವರೆಡನ್ನೂ ಮಾಡದ ಕೈಗಾರಿಕೆಗಳು ಅಳಿದು ಹೋಗುವ ಅಪಾಯ ಇರುತ್ತದೆ. ರಾಜ್ಯಕ್ಕೆ ಹೊಸದಾಗಿ ಹತ್ತು ಕ್ಲಸ್ಟರ್ ಆರಂಭಕ್ಕೆ ಒಪ್ಪಿಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶವಿದೆ~ ಎಂದು  ಸಣ್ಣ-ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ (ಎಂಎಸ್‌ಎಂಇ) ನಿರ್ದೇಶಕ ಎಸ್.ಎಂ.ಜಮಖಂಡಿ ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜೆ.ರಂಗರಾಮು, ರಾಜ್ಯ ತಾಂತ್ರಿಕ ಉನ್ನತೀಕರಣ ಪರಿಷತ್‌ನ ವ್ಯವಸ್ಥಾಪಕ ನಿರ್ದೇಶಕ ಬಾಬು ಸಿದ್ದಕುಮಾರ್, ಎಂಎಸ್‌ಎಂಇ ಉಪ ನಿರ್ದೇಶಕ ಎಸ್.ಎನ್.ರಂಗಪ್ರಸಾದ್, ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪ್ರಕಾಶ್ ರಾಯ್ಕರ್, ಗೌರವ ಕಾರ್ಯದರ್ಶಿ ಬಿ.ಎಲ್.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.