ADVERTISEMENT

ಕಳವಾ‌ದ ಮೊಬೈಲ್‌: ಸಿ.ಎಂ ಸಹಾಯ ಕೋರಿದ ಯುವತಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 20:03 IST
Last Updated 8 ಮಾರ್ಚ್ 2018, 20:03 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಬೆಂಗಳೂರು: ಕಳವಾಗಿದ್ದ ಮೊಬೈಲ್‌ ಹುಡುಕಿಕೊಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಕಾರಣಕ್ಕೆ ಕೋರಮಂಗಲ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ವಂಶಿಕಾ ಎಂಬುವರು ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಾಯ ಕೋರಿದ್ದಾರೆ.

ತಾವರೆಕೆರೆ ರಸ್ತೆಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ವಾಸವಿರುವ ವಂಶಿಕಾ, ಸ್ನೇಹಿತರ ಜತೆಗೆ ಮಾ. 3ರಂದು ಕೋರಮಂಗಲದ ಸೋನಿ ಸಿಗ್ನಲ್ ಬಳಿಯ ‘ಸಪ್ನಾ ಮೊಬೈಲ್ ವರ್ಲ್ಡ್‌’ ಮಳಿಗೆಗೆ ಹೋಗಿದ್ದರು. ಸಂಜೆ 6.30 ಗಂಟೆಯಿಂದ ರಾತ್ರಿ 8.10ರವರೆಗೆ ಮಳಿಗೆಯಲ್ಲಿ ಇದ್ದರು. ಅದೇ ಅವಧಿಯಲ್ಲಿ ಅವರ ‘ಒನ್ ಪ್ಲಸ್‌ 5ಟಿ’ ಮೊಬೈಲ್‌ ಕಳವಾಗಿತ್ತು.

ಆ ಸಂಬಂಧ ಮಳಿಗೆಯ ಮಾಲೀಕರನ್ನು ವಿಚಾರಿಸಿದರೂ ಪ್ರಯೋಜವಾಗಿರಲಿಲ್ಲ. ಬಳಿಕ ವಂಶಿಕಾ, ಅಂದೇ ರಾತ್ರಿ ಕೋರಮಂಗಲ ಠಾಣೆಗೆ ಹೋಗಿ ದೂರು ನೀಡಿದ್ದರು. ಆದರೆ, ಎಫ್‌ಐಆರ್‌ ದಾಖಲಿಸಿಕೊಂಡಿರಲಿಲ್ಲ. ‘ನಾಳೆ ಬನ್ನಿ, ಹುಡುಕೋಣ’ ಎಂದಷ್ಟೇ ಹೇಳಿ ಕಳುಹಿಸಿದ್ದರು.

ADVERTISEMENT

ಮರುದಿನ ಠಾಣೆಗೆ ಹೋಗಿ ವಿಚಾರಿಸಿದಾಗಲೂ, ‘ಹುಡುಕುತ್ತಾ ಇದ್ದೇವೆ. ನಾಳೆ ಬನ್ನಿ’ ಎಂದಿದ್ದರು. ಅದರ ಮರುದಿನ ಹೋದಾಗಲೂ ಅದೇ ಸಿದ್ಧ ಉತ್ತರ ನೀಡಿದ್ದರು. ‘ಮಳಿಗೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇದೆ. ಅದನ್ನು ಪರಿಶೀಲಿಸಿ’ ಎಂದು ವಂಶಿಕಾ ಕೇಳಿಕೊಂಡಿದ್ದರು. ಅದಕ್ಕೂ ಪೊಲೀಸರು ತಲೆ ಕೆಡಿಸಿಕೊಂಡಿರಲಿಲ್ಲ.

ನೊಂದ ವಂಶಿಕಾ, ಪೊಲೀಸರ ವರ್ತನೆ ಬಗ್ಗೆ ಗೃಹ ಸಚಿವ ಹಾಗೂ ಮುಖ್ಯಮಂತ್ರಿಗೆ ಟ್ವೀಟ್‌ ಮಾಡಿದ್ದಾರೆ.  ‘ಸಂಬಂಧಪಟ್ಟವರಿಗೆ ಸೂಚನೆ ನೀಡುವುದಾಗಿ’ ಗೃಹಸಚಿವರ ಹಾಗೂ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.