ADVERTISEMENT

ಕಳವು ಪ್ರಕರಣ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 20:14 IST
Last Updated 4 ಡಿಸೆಂಬರ್ 2012, 20:14 IST

ಬೆಂಗಳೂರು: ಕನ್ನಕಳವು ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ನಗರದ ಈಶಾನ್ಯ ವಿಭಾಗದ ಪೊಲೀಸರು ಒಂದೂವರೆ ಕೆ.ಜಿ ಚಿನ್ನಾಭರಣ ಸೇರಿದಂತೆ 52 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

`ಸಿಬ್ಬಂದಿ ಐದು ಆರೋಪಿಗಳನ್ನು ಬಂಧಿಸಿ ಸುಮಾರು ಒಂದೂವರೆ ಕೆ.ಜಿ ಚಿನ್ನಾಭರಣ, ಒಂದು ಕೆ.ಜಿ ಬೆಳ್ಳಿ ವಸ್ತುಗಳು ಹಾಗೂ ಏಳು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ' ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮನೆಗಳಲ್ಲಿ ಕಳವು ಮಾಡುತ್ತಿದ್ದ ಆರೋಪದ ಮೇಲೆ ಹೊಂಗಸಂದ್ರದ ಚಂದ್ರು (25) ಮತ್ತು ಪುಟ್ಟರಾಜು (26) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಬೀಗ ಹಾಕಿರುತ್ತಿದ್ದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬಾಗಿಲು ಮುರಿದು ಒಳ ನುಗ್ಗಿ ಕಳವು ಮಾಡುತ್ತಿದ್ದರು. ಅವರ ಬಂಧನದಿಂದ ಎಂಟು ಪ್ರಕರಣಗಳು ಪತ್ತೆಯಾಗಿವೆ ಎಂದು ಕೊಡಿಗೇಹಳ್ಳಿ ಪೊಲೀಸರು ಹೇಳಿದ್ದಾರೆ.

ಚಂದ್ರುನನ್ನು ಇತ್ತೀಚೆಗಷ್ಟೇ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ. ಆತನ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಸಹ ಜಾರಿ ಮಾಡಿತ್ತು. ಮತ್ತೊಬ್ಬ ಆರೋಪಿ ಪುಟ್ಟರಾಜು ನಗರದ ವಿವಿಧೆಡೆ ಮಹಿಳೆಯರ ಸರಗಳನ್ನು ದೋಚಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯಲಹಂಕ ಪೊಲೀಸರು ಕೋಗಿಲು ಲೇಔಟ್‌ನ ಅಬ್ದುಲ್ ಅಲ್ತಾಫ್ (28), ಕೆಂಪಾಪುರ ಅಗ್ರಹಾರದ ಸುರೇಶ್ (25) ಮತ್ತು ನಟರಾಜ್ (28) ಎಂಬುವರನ್ನು ಬಂಧಿಸಿದ್ದಾರೆ.

ಆರೋಪಿಗಳು ಯಲಹಂಕ, ತಿಲಕ್‌ನಗರ, ಕೆಂಪಾಪುರ ಅಗ್ರಹಾರ, ಸಿಟಿ ಮಾರುಕಟ್ಟೆ, ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯ ಮನೆಗಳಲ್ಲಿ ಕಳವು ಮಾಡಿದ್ದರು. ಅಲ್ಲದೇ, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸಿ ಸಾರ್ವಜನಿಕರ ಆಭರಣ ಹಾಗೂ ಹಣ ದೋಚಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈಶಾನ್ಯ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ ಅವರ ಮಾರ್ಗದರ್ಶನದಲ್ಲಿ ಯಲಹಂಕ ಉಪ ವಿಭಾಗದ ಎಸಿಪಿ ಎಂ.ಜಿ.ರಾಮಕೃಷ್ಣ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.