ADVERTISEMENT

ಕಾಂಗ್ರೆಸ್‌ ನಾಯಕರು ರಣಹದ್ದುಗಳು ಇದ್ದಂತೆ

ಬಾಬು ಜಗಜೀವನ ರಾಮ್‌ ಜನ್ಮದಿನೋತ್ಸವದಲ್ಲಿ ಪಿ.ಜಿ.ಆರ್‌.ಸಿಂಧ್ಯ ಕಿಡಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಬಾಬು ಜಗಜೀವನ ರಾಮ್‌ ಅವರ ಭಾವಚಿತ್ರಕ್ಕೆ ಎಚ್‌.ಡಿ.ದೇವೇಗೌಡ ಪುಷ್ಪನಮನ ಸಲ್ಲಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಆನಂದ್, ಪಿ.ಜಿ.ಆರ್‌.ಸಿಂಧ್ಯ ಇದ್ದಾರೆ -ಪ್ರಜಾವಾಣಿ ಚಿತ್ರ
ಬಾಬು ಜಗಜೀವನ ರಾಮ್‌ ಅವರ ಭಾವಚಿತ್ರಕ್ಕೆ ಎಚ್‌.ಡಿ.ದೇವೇಗೌಡ ಪುಷ್ಪನಮನ ಸಲ್ಲಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಆನಂದ್, ಪಿ.ಜಿ.ಆರ್‌.ಸಿಂಧ್ಯ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಮ್‌ ಅವರನ್ನು ಕಾಂಗ್ರೆಸ್‌ ಪಕ್ಷವು ಕಡೆಗಣಿಸಿತ್ತು. ಆ ಪಕ್ಷದ ನಾಯಕರು ರಣಹದ್ದುಗಳು ಇದ್ದಂತೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್‌.ಸಿಂಧ್ಯ ಕಿಡಿಕಾರಿದರು.

ಪಕ್ಷದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಬಾಬು ಜಗಜೀವನ ರಾಮ್‌ ಅವರ 110ನೇ ಜನ್ಮದಿನೋತ್ಸವ’ದಲ್ಲಿ ಅವರು ಮಾತನಾಡಿದರು.

1971ರಲ್ಲಿ ಭಾರತ–ಪಾಕ್ ಮಧ್ಯೆ ಯುದ್ಧ ನಡೆದಾಗ ಜಗಜೀವನ ರಾಮ್‌ ರಕ್ಷಣಾ ಸಚಿವರಾಗಿದ್ದರು. ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದ್ದರೂ ಅದರ ಕೀರ್ತಿ ಅವರಿಗೆ ಸಲ್ಲದಂತೆ ಕಾಂಗ್ರೆಸ್‌ ಪಕ್ಷದ ನಾಯಕರು ನೋಡಿಕೊಂಡಿದ್ದರು. ಅಲ್ಲದೆ, ಅವರು ಕೃಷಿ ಸಚಿವರಾಗಿದ್ದಾಗ ಜಾರಿಗೆ ತಂದ ಕಾರ್ಯಕ್ರಮಗಳನ್ನು ಕೇಂದ್ರವು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರಲಿಲ್ಲ. ಆದರೆ, ಪ್ರಧಾನಿಯಾಗಿದ್ದ ಎಚ್‌.ಡಿ.ದೇವೇಗೌಡರು ಅವುಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿದ್ದರು. ಹೀಗಾಗಿ, ಅವರ ಬಗ್ಗೆ ಮಾತನಾಡುವ ನೈತಿಕತೆ ದೇವೇಗೌಡರಿಗೆ ಮಾತ್ರ ಇದೆ ಎಂದು ವಿವರಿಸಿದರು.

ADVERTISEMENT

ಬಾಬು ಜಗಜೀವನ ರಾಮ್‌ ದಕ್ಷ ಆಡಳಿತಗಾರರಾಗಿದ್ದರು. ಆದರೆ, ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ದೂರಿದರು.

ಜೆಡಿಎಸ್‌ ಸೇರ್ಪಡೆ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಹಾಲಿ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಸದಸ್ಯರು, ಮಾಜಿ ಸದಸ್ಯರು ಸೇರಿದಂತೆ 34 ಮುಖಂಡರು ಕಾಂಗ್ರೆಸ್‌ ಪಕ್ಷ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ‘ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಂಡಿರುವುದರಿಂದ ಶ್ರೀನಿವಾಸಪುರ ಕ್ಷೇತ್ರದ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ಬಲ ಬಂದಿದೆ’ ಎಂದರು.
**
ಬಾಬು ಜಗಜೀವನ ರಾಮ್‌ ಅವರಿಗೆ ಭಾರತ ರತ್ನ ನೀಡಬೇಕು.
– ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.