ADVERTISEMENT

ಕಾಂಗ್ರೆಸ್, ಬಿಜೆಪಿಯಿಂದ ಸುಳ್ಳು ಆಶ್ವಾಸನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST

ಬೆಂಗಳೂರು: ಚುನಾವಣಾ ಪ್ರಣಾಳಿಕೆ ಯಲ್ಲಿ ನೀಡಿದ್ದ ಆಶ್ವಾಸನೆ ಗಳನ್ನು ಕಾಂಗ್ರೆಸ್, ಬಿಜೆಪಿ ಈಡೇರಿಸಿಲ್ಲ. ಸುಳ್ಳು ಭರವಸೆಗಳನ್ನು ನೀಡುತ್ತಿರುವ ಆ ಎರಡೂ ಪಕ್ಷಗಳನ್ನು ತಿರಸ್ಕರಿಸಬೇಕು ಎಂದು ಬಿ.ಎಸ್.ಆರ್ ಕಾಂಗ್ರೆಸ್‌ನ ಸಂಸ್ಥಾಪಕ ಅಧ್ಯಕ್ಷ ಬಿ.ಶ್ರೀರಾಮುಲು ಶನಿವಾರ ಇಲ್ಲಿ ಜನರಿಗೆ ಕರೆ ನೀಡಿದರು.

ಬೆಂಗಳೂರಿನ ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಸ್ವಾಭಿಮಾನಿ ಯುವ ಸಂದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆ ಯಲ್ಲಿ ಬಿಜೆಪಿಯು, ಪ್ರತಿ ವರ್ಷ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಭರವಸೆ ಈಡೇರಿಸಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ, ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರತಿ ವರ್ಷ ಒಂದು ಕೋಟಿ ಉದ್ಯೋಗಾ ವಕಾಶ ಸೃಷ್ಟಿಸುವುದಾಗಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್, ಬಿಜೆಪಿ ಯುವಕರಿಗೆ ನೀಡಿರುವ ಕೊಡುಗೆ ಶೂನ್ಯ ಎಂದು ಅವರು ಹೇಳಿದರು.

ಬಿ.ಎಸ್.ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜೆಟ್‌ನಲ್ಲಿ ಯುವಕರಿಗೆ 25 ಸಾವಿರ ಕೋಟಿ ರೂಪಾಯಿ ಮೀಸಲಿರಿಸ ಲಿದೆ. ಎಸ್ಸೆಸ್ಸೆಲ್ಸಿ ಪಾಸಾದ ಎಲ್ಲರಿಗೂ ಲ್ಯಾಪ್‌ಟಾಪ್ ನೀಡಲಾಗುವುದು. ಎಲ್ಲ ವರ್ಗದ ಜನರಿಗೆ ಉಚಿತವಾಗಿ ಶಿಕ್ಷಣ ನೀಡಲಿದೆ. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ಐದು ಸಾವಿರ ರೂಪಾಯಿ ಭತ್ಯೆ ನೀಡಲಿದೆ ಎಂದು ಭರವಸೆ ನೀಡಿದರು.

ಕಾವೇರಿ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಹುನ್ನಾರ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಎಂದು ಸಲಹೆ ಮಾಡಿದರು.

`ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಜಲಾಶಯಗಳಲ್ಲಿ ಹೂಳು ತೆಗೆಸಲು ಆದ್ಯತೆ ನೀಡಲಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದೆ~ ಎಂದು ಭರವಸೆ ನೀಡಿದರು. ಬಿ.ಎಸ್.ಆರ್ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಕೆ.ಆರ್.ವೆಂಕಟೇಶಗೌಡ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ, ಮಾಜಿ ಸಂಸದ ವಿರೂಪಾಕ್ಷಪ್ಪ, ಪಕ್ಷದ ವಕ್ತಾರ ಪ್ರೊ.ರವೀಂದ್ರ ರೇಷ್ಮೆ, ಮುಖಂಡರಾದ ಖಾಲಿದ್ ಅಹಮದ್, ಡಾ.ವೆಂಕಟ ಮಹಿಪಾಲ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.