ADVERTISEMENT

ಕಾಚರಕನಹಳ್ಳಿ: ಆತಂಕದ ವಾತಾವರಣ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 18:55 IST
Last Updated 17 ಫೆಬ್ರುವರಿ 2011, 18:55 IST

ಬೆಂಗಳೂರು: ನಗರದ ಹೆಣ್ಣೂರು ಮುಖ್ಯರಸ್ತೆಯ ಕಾಚರಕನಹಳ್ಳಿಯಲ್ಲಿರುವ ಕ್ರೈಸ್ತರ ಪ್ರಾರ್ಥನಾ ಮಂದಿರವೊಂದರ ಮೇಲ್ಛಾವಣಿಗೆ ಕಿಡಿಗೇಡಿಗಳು ಹಾನಿ ಉಂಟು ಮಾಡಿದ್ದರಿಂದ ಸ್ಥಳದಲ್ಲಿ ಗುರುವಾರ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ಪ್ರಾರ್ಥನಾ ಮಂದಿರಕ್ಕೆ ಹೊಂದಿಕೊಂಡಂತೆ ಕುಪೇಂದ್ರ ಎಂಬುವರಿಗೆ ಸೇರಿದ ಖಾಲಿ ನಿವೇಶನವಿದೆ. ಪ್ರಾರ್ಥನಾ ಮಂದಿರದ ಸ್ಥಳದ ವಿಷಯವಾಗಿ ಕುಪೇಂದ್ರ ಮತ್ತು ಜಬ್ಬರ್ ಎಂಬುವರ ಮಕ್ಕಳ ನಡುವೆ ವಿವಾದವಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಪ್ರಾರ್ಥನಾ ಮಂದಿರವಿರುವ ಸ್ಥಳವನ್ನು ಜಬ್ಬರ್ ಅವರು ಕೆಲ ವರ್ಷಗಳ ಹಿಂದೆ ಕ್ರೈಸ್ತರಿಗೆ ಬಾಡಿಗೆಗೆ ಕೊಟ್ಟಿದ್ದರು. ಜಬ್ಬರ್ ಅವರಿಗೆ ಏಳು ಮಕ್ಕಳಿದ್ದು, ಆಸ್ತಿ ಹಂಚಿಕೆ ವಿಷಯದಲ್ಲಿ ಅವರ ನಡುವೆ ಜಗಳ ನಡೆಯುತ್ತಿತ್ತು.ಈ ನಡುವೆ ಕುಪೇಂದ್ರ ಅವರು ಜಬ್ಬರ್ ಅವರಿಂದ ಆ ಸ್ಥಳವನ್ನು ಖರೀದಿಸಿದ್ದರು. ಕೆಲ ದಿನಗಳ ಬಳಿಕ ಜಬ್ಬರ್ ನಿಧನರಾದರು. ಅಂದಿನಿಂದಲೂ ಈ ಆಸ್ತಿಯ ವಿವಾದ ಸಂಬಂಧದ ಪ್ರಕರಣವು ನ್ಯಾಯಾಲಯದಲ್ಲಿದೆ.

‘ಕ್ರೈಸ್ತ ಸಮುದಾಯದ ಮುಖಂಡ ಯಾಗಪ್ಪ ಎಂಬುವರು ಮಂದಿರದಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.ಅವರು ಮಂದಿರವನ್ನು ವಿಸ್ತರಿಸಿ, ಆರ್‌ಸಿಸಿ ಶೀಟ್‌ಗಳನ್ನು ಹಾಕಿ ಆ ಸ್ಥಳದಲ್ಲಿ ಶೆಡ್ ನಿರ್ಮಿಸಿದ್ದರು.ರಾತ್ರಿ ದುಷ್ಕರ್ಮಿಗಳು ಶೆಡ್‌ನ ಶೀಟುಗಳನ್ನು ಹೊಡೆದು ಹಾಕಿ, ನಾಮಫಲಕವನ್ನು ಸಹ ಕಿತ್ತು ಹಾಕಿದ್ದಾರೆ’ ಎಂದು ಕೆ.ಆರ್.ಪುರ ಉಪವಿಭಾಗದ ಎಸಿಪಿ ಎನ್.ನರಸಿಂಹಯ್ಯ ತಿಳಿಸಿದರು.

ಈ ಘಟನೆಯಿಂದ ಆಕ್ರೋಶಗೊಂಡ ಕ್ರೈಸ್ತರು ‘ಪ್ರಾರ್ಥನಾ ಮಂದಿರಕ್ಕೆ ಹಾನಿ ಮಾಡಿರುವವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ಹೆಣ್ಣೂರು ಮುಖ್ಯರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ, ಪರಿಸ್ಥಿತಿ ನಿಯಂತ್ರಿಸಿದರು.ಹೆಚ್ಚಿನ ಭದ್ರತೆಗಾಗಿ ಕೆಎಸ್‌ಆರ್‌ಪಿ ಯ ಒಂದು ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಪೇಂದ್ರ ಮತ್ತು ಆತನ ಸ್ನೇಹಿತರಾದ ಕುಮಾರಸ್ವಾಮಿ, ನಂದೀಶ್, ಮಹೇಶ್ ಎಂಬುವವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

‘ಪ್ರಾರ್ಥನಾ ಮಂದಿರವಿರುವ ಜಾಗ ನನಗೆ ಸೇರಿದ್ದು, ಯಾಗಪ್ಪ ಅವರು ಆ ಸ್ಥಳದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ್ದಾರೆ’ ಎಂದು ಕುಪೇಂದ್ರ ಅವರು ದೂರು ಕೊಟ್ಟಿದ್ದಾರೆ.ಅಂತೆಯೇ ಯಾಗಪ್ಪ, ಕುಪೇಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪರಸ್ಪರರ ದೂರುಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬಾಣಸವಾಡಿ ಪೊಲೀಸರು ತಿಳಿಸಿದ್ದಾರೆ.

ಶಾಸಕ ಕೆ.ಜೆ.ಜಾರ್ಜ್, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್, ಪೂರ್ವ ವಿಭಾಗದ ಡಿಸಿಪಿ ಚಂದ್ರಶೇಖರ್, ಬಿಬಿಎಂಪಿ ಜೆಡಿಎಸ್ ನಾಯಕ ಪದ್ಮನಾಭ ರೆಡ್ಡಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಭಾವನೆಗಳಿಗೆ ಧಕ್ಕೆ’
‘ಕಾಚರಕನಹಳ್ಳಿಯಲ್ಲಿ ಪ್ರಾರ್ಥನಾ ಮಂದಿರಕ್ಕೆ ಹಾನಿ ಮಾಡಿರುವುದು ಖಂಡನೀಯ. ಈ ರೀತಿಯ ಘಟನೆಗಳಿಂದ ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡುತ್ತಿರುವುದು ಸರಿಯಲ್ಲ’ ಎಂದು ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ತಿಳಿಸಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಸಿಖ್ ಸಮುದಾಯದವರ ಮಂದಿರಗಳ ಮೇಲೆ ದಾಳಿ ನಡೆಸಿ ಅವರ ಮನಸ್ಸಿಗೆ ನೋವುಂಟು ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ.ಪ್ರಾರ್ಥನಾ ಮಂದಿರಕ್ಕೆ ಹಾನಿ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ವೈಯಕ್ತಿಕ ಕಾರಣ’
‘ವೈಯಕ್ತಿಕ ಕಾರಣಗಳಿಗಾಗಿ ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆದಿದ್ದು, ಈ ಘಟನೆಗೂ ಧಾರ್ಮಿಕ ಸಂಘಟನೆಗಳಿಗೂ ಯಾವುದೇ ಸಂಬಂಧವಿಲ್ಲ’ ಎಂದು ಗೃಹ ಸಚಿವ ಆರ್.ಅಶೋಕ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಾರ್ಥನೆಗಾಗಿ ಮಂದಿರವೊಂದನ್ನು ಕಟ್ಟಿಕೊಳ್ಳಲಾಗಿದ್ದು, ಅದಕ್ಕೆ ಹೊಂದಿಕೊಂಡಂತಿರುವ ಕುಪೇಂದ್ರ ಎಂಬುವರ ಜಮೀನಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇಬ್ಬರು ವ್ಯಕ್ತಿಗಳ ನಡುವಿನ ಕಲಹದಿಂದಾಗಿ ಈ ವ್ಯಾಜ್ಯ ನಡೆದಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದು ತಿಳಿದುಬಂದಿದೆ. ಇದಕ್ಕೆ ಯಾವುದೇ ಧಾರ್ಮಿಕ ಸಂಘ ಸಂಸ್ಥೆಗಳು ಹೊಣೆಯಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.