ADVERTISEMENT

ಕಾಣೆಯಾಗಿದ್ದ ಏರ್‌ಇಂಡಿಯಾ ಅಧಿಕಾರಿ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 19:58 IST
Last Updated 6 ಜನವರಿ 2014, 19:58 IST

ಬೆಂಗಳೂರು: ಎಚ್‌ಎಎಲ್‌ ಸಮೀಪದ ಇಸ್ಲಾಂಪುರದಿಂದ ಶುಕ್ರವಾರ (ಜ.3) ರಾತ್ರಿ ಕಾಣೆಯಾಗಿದ್ದ ಏರ್ ಇಂಡಿಯಾ ವಿಮಾನ ಕಾರ್ಯಾಚರಣೆಗಳ ಹಿರಿಯ ವ್ಯವಸ್ಥಾಪಕ ಅರುಣ್‌ ಮೆಹ್ತಾ (41) ಸೋಮವಾರ ಮನೆಗೆ ಮರಳಿದ್ದಾರೆ.

ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಪತ್ನಿ ಅನಿತಾ ಅವರಿಗೆ ದೂರವಾಣಿ ಕರೆ ಮಾಡಿದ್ದ ಅರುಣ್‌,  ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರು. ಆದರೆ, ಅವರು ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಅನಿತಾ ಅವರು ಎಚ್‌ಎಎಲ್ ಠಾಣೆಯಲ್ಲಿ ಜ.4ರಂದು ದೂರು ದಾಖಲಿಸಿದ್ದರು.

‘ಕೆಲಸದ ಒತ್ತಡ ಹೆಚ್ಚಾಗಿದ್ದ ಕಾರಣ ಮನಸ್ಸಿಗೆ ಶಾಂತಿ ಇಲ್ಲದಂತಾಗಿತ್ತು. ಹೀಗಾಗಿ ತಿರುಪತಿಗೆ ಹೋಗಿದ್ದೆ’ ಎಂದು ಅರುಣ್‌ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‘ನಾಲ್ಕು ಮಂದಿ ಯುವಕರು ನನ್ನ ಮೇಲೆ ಹಲ್ಲೆ ನಡೆಸಿದ್ದರು. ಪ್ರಜ್ಞೆ ತಪ್ಪಿದ್ದ ನನ್ನನ್ನು ತುಮಕೂರು ಬಳಿಯ ಪಾಳು ಮನೆಯೊಂದರಲ್ಲಿ ಬಿಟ್ಟು ಹೋಗಿ­ದ್ದರು. ಸೋಮವಾರ ಬೆಳಿಗ್ಗೆ ಎಚ್ಚರ­ವಾಯಿತು. ಬಳಿಕ ಹೆದ್ದಾರಿ­ಯಲ್ಲಿ ಲಾರಿ ಹಿಡಿದು ನಗರಕ್ಕೆ ಬಂದೆ’ ಎಂದು ಅರುಣ್‌ ಮೊದಲಿಗೆ ಹೇಳಿಕೆ ನೀಡಿ­ದ್ದರು. ಆದರೆ, ಹೆಚ್ಚಿನ ವಿಚಾರಣೆ ನಡೆಸಿ­ದಾಗ ತಿರುಪತಿಗೆ ಹೋಗಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

‘ಜೀವನ್‌ಬಿಮಾ ನಗರದಿಂದ ಬಂದು ಇಸ್ಲಾಂ­ಪುರ ನಿಲ್ದಾಣ­ದಲ್ಲಿ ಇಳಿದೆ. ನಂತರ ಬಿಎಂಟಿಸಿ ಬಸ್‌ನಲ್ಲಿ ಕೆ.ಆರ್‌.ಪುರಕ್ಕೆ ಹೋಗಿ ಅಲ್ಲಿಂದ ಖಾಸಗಿ ಬಸ್‌ನಲ್ಲಿ ತಿರುಪತಿಗೆ ಹೋದೆ’ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.