ADVERTISEMENT

ಕಾನೂನು ಪ್ರವೇಶ: ಉಪನ್ಯಾಸದಲ್ಲಿ ಗೊಂದಲ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2010, 12:55 IST
Last Updated 31 ಡಿಸೆಂಬರ್ 2010, 12:55 IST

ಬೆಂಗಳೂರು: ಇಲ್ಲಿಯ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಂಬೇಡ್ಕರ್ ವಾರ್ಷಿಕ ಸಾರ್ವಜನಿಕ ಉಪನ್ಯಾಸದಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಪ್ರವೇಶ ನೀತಿ ವಿರೋಧಿಸಿ ದಲಿತ ಮುಖಂಡರು ಘೋಷಣೆ ಕೂಗಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಏರ್ಪಟ್ಟಿತ್ತು. ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದೆ. ದಲಿತ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುತ್ತಿಲ್ಲ ಎಂದು ದೂರಿ, ಸಭೆಯಲ್ಲಿದ್ದ ವಿ.ವಿ.ಯ ಕುಲಪತಿ ಪ್ರೊ.ಆರ್.ವೆಂಕಟರಾವ್ ಅವರ ವಿರುದ್ಧ ಮುಖಂಡರು ಧಿಕ್ಕಾರ ಕೂಗಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ. ಎಸ್.ದ್ವಾರಕನಾಥ್, ಅಹಿಂದ ಮುಖಂಡ ಪ್ರೊ.ಎನ್.ವಿ.ನರಸಿಂಹಯ್ಯ, ಸಮತಾ ಸೈನಿಕ ದಳದ ರಾಜ್ಯ ಅಧ್ಯಕ್ಷ ಎಂ.ವೆಂಕಟಸ್ವಾಮಿ ಅವರು, ‘ಡಾ.ಬಿ.ಆರ್.ಅಂಬೇಡ್ಕರ್ ಅವರು ಸೂಚಿಸಿದ ಹಾಗೂ ಸಂವಿಧಾನ ಅಂಗೀಕರಿಸಿದ ಮೀಸಲಾತಿ ನಿಯಮಗಳನ್ವಯ ಕಾಲೇಜಿನಲ್ಲಿ ಪ್ರವೇಶ ನೀಡಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕುಲಪತಿಗಳು ಕ್ರಮ ಕೈಗೊಂಡಿಲ್ಲ. ಮೀಸಲಾತಿ ನಿಯಮಗಳ ಪ್ರಕಾರವೇ ಶೇ 49.5 ಪ್ರಮಾಣದ ಸೀಟುಗಳನ್ನು ಮೀಸಲಿಡಬೇಕು’ ಎಂದು ಒತ್ತಾಯಿಸಿದರು. ನಂತರ ಮನವಿಯನ್ನು ಕುಲಪತಿ ಪ್ರೊ.ವೆಂಕಟರಾವ್‌ಗೆ ನೀಡಿದರು. ನಂತರ ಸಭೆ ಮುಂದುವರೆಯಿತು.

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್), ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ಜಂಟಿಯಾಗಿ ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ, ಅಮೆರಿಕದ ಡ್ಯೂಕ್ ವಿ.ವಿ.ಯ ಸ್ಯಾನ್‌ಫೋರ್ಡ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ ಸಂಸ್ಥೆಯ ಉಪನ್ಯಾಸಕ ಪ್ರೊ.ವಿಲಿಯಂ ಡ್ಯಾರಿಟಿ ಮಾತನಾಡಿ, ‘ಇಂದಿಗೂ ಅಮೆರಿಕದಲ್ಲಿ ವರ್ಣಭೇದ ನೀತಿ ಜಾರಿಯಲ್ಲಿದ್ದು, ನಿರುದ್ಯೋಗಿಗಳ ಪ್ರಮಾಣದಲ್ಲಿ ಬಿಳಿಯರಿಗೆ ಹೋಲಿಸಿದರೆ ಶೇ 12ರಷ್ಟು ಜಾಸ್ತಿ ಕರಿಯರಿದ್ದಾರೆ’ ಎಂದು ಹೇಳಿದರು.

‘ಸಾಮಾಜಿಕವಾಗಿ ಹಿಂದುಳಿದವರು ಅಸಂಘಟಿತ ವಲಯದಲ್ಲಿದ್ದಾರೆ. ಅವರಿಗೂ ನೀತಿ, ನಿರೂಪಕ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ನೀಡಬೇಕು. ಅಂದಾಗ ಮಾತ್ರ ಅವರ ಪರವಾದ ನೀತಿಗಳು ಜಾರಿಯಾಗಲು ಸಾಧ್ಯ’ ಎಂದರು.ಬೆಂಗಳೂರು ವಿ.ವಿ. ಕುಲಪತಿ ಡಾ.ಎನ್.ಪ್ರಭುದೇವ್, ಐಸೆಕ್ ಸಂಸ್ಥೆಯ ಅಧ್ಯಕ್ಷ ಪ್ರೊ.ಕೆ.ಆರ್. ಎಸ್.ಮೂರ್ತಿ, ನಿರ್ದೇಶಕ ಪ್ರೊ.ಆರ್. ಎಸ್.ದೇಶಪಾಂಡೆ, ಡ್ಯಾರಿಟಾ ಅವರ ಪತ್ನಿ ಆಂಡ್ರಿಯಾ ಕೆ.ಮುಲ್ಲೆನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.