ADVERTISEMENT

ಕಾಮಗಾರಿ: ಗುತ್ತಿಗೆದಾರರ ಅನಾಸಕ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:59 IST
Last Updated 9 ಡಿಸೆಂಬರ್ 2013, 19:59 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ 2,726 ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದ್ದರೂ ಅರ್ಧದಷ್ಟು ಕಾಮಗಾರಿಗಳನ್ನು ಕೈಗೊಳ್ಳಲು ಯಾವ ಗುತ್ತಿಗೆದಾರರೂ ಮುಂದೆ ಬಂದಿಲ್ಲ. ಹೀಗಾಗಿ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಂದಾಗುವವರೆಗೆ ನಾಗರಿಕರು ಮೂಲ ಸೌಕರ್ಯಗಳಿಗೆ ಕಾಯುವುದು ಅನಿವಾರ್ಯವಾಗಿದೆ.

ಬಿಬಿಎಂಪಿ ವಾರ್ಡ್‌ಮಟ್ಟದ ಕಾಮಗಾರಿಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಚ್‌. ಬಸವರಾಜು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು.

‘ಏಕಗವಾಕ್ಷಿ ಯೋಜನೆ ಮೂಲಕ 2,726 ಕಾಮಗಾರಿ ಗಳಿಗೆ ಟೆಂಡರ್‌ ಕರೆಯಲಾಗಿತ್ತು. ಅವುಗಳಲ್ಲಿ 1,367 ಕಾಮಗಾರಿಗಳಿಗೆ ಮಾತ್ರ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಮಿಕ್ಕ 1,359 ಕಾಮಗಾರಿ ಕೈಗೊಳ್ಳಲು ಯಾರೂ ಆಸಕ್ತಿ ವಹಿಸಿಲ್ಲ’ ಎಂದು ತಿಳಿಸಿದರು.

‘1,359 ಕಾಮಗಾರಿಗಳಿಗೆ ಎರಡನೇ ಬಾರಿ ಟೆಂಡರ್‌ ಕರೆದಾಗಲೂ ಯಾರಿಂದಲೂ ಪ್ರತಿಕ್ರಿಯೆ ಬಂದಿಲ್ಲ. ಮೂರನೇ ಬಾರಿ ಇನ್ನೊಮ್ಮೆ ಟೆಂಡರ್‌ ಕರೆಯಲಾಗುತ್ತದೆ. ಆಗ ಸಹ ಯಾರೂ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಆರ್‌ಐಡಿಎಲ್‌) ಮೂಲಕ ಕಾಮಗಾರಿ ನಡೆಸಲಾಗುವುದು’ ಎಂದು ಹೇಳಿದರು.

‘ನಿಯಮಾವಳಿ ಪ್ರಕಾರ, ಟೆಂಡರ್‌ ಮೂಲಕವೇ ಕಾಮಗಾರಿ ಹಂಚಿಕೆ ಮಾಡಬೇಕು. ಟೆಂಡರ್‌ನಲ್ಲಿ ಯಾವುದೇ ಪ್ರತಿಕ್ರಿಯೆ ಸಿಗದಿದ್ದರೆ ಮಾತ್ರ ಕೆಆರ್‌ಐ ಡಿ ಎಲ್‌ಗೆ ಅವುಗಳನ್ನು ವಹಿಸಿಕೊಡ ಬಹುದು’ ಎಂದರು. ‘ಗುತ್ತಿಗೆ ದಾರರಿಗೆ ಬಾಕಿ ಉಳಿಸಿಕೊಂಡಿರುವುದೇ ಅವರ ಅನಾಸಕ್ತಿಗೆ ಕಾರಣವೇ’ ಎಂದು ಕೇಳಿದಾಗ, ‘ಇರಬಹುದು’ ಎಂದು ಬಸವರಾಜು ಉತ್ತರಿಸಿದರು.

‘ಬಿಬಿಎಂಪಿ ಕಚೇರಿಗಳಲ್ಲಿ ನಮ್ಮ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದ್ದು, ಬಹುತೇಕ ಕಚೇರಿಗಳಲ್ಲಿ ನಾಮಫಲಕ ಹಾಗೂ ಮಾಹಿತಿ ಫಲಕಗಳು ಇಲ್ಲ. ಇದರಿಂದ ಸಾರ್ವಜನಿಕರಿಗೆ ಅನನುಕೂಲ ಆಗುತ್ತಿದೆ. ಸಹಾಯಕ ಎಂಜಿನಿಯರ್‌ರಿಂದ ಜಂಟಿ ಆಯುಕ್ತರವರೆಗೆ ಎಲ್ಲರೂ ನಾಮಫಲಕ ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ಆಯುಕ್ತರಿಗೆ ಆದೇಶ ಹೊರಡಿಸುವಂತೆ ತಿಳಿಸಲಾಗುವುದು’ ಎದರು.

‘ಪ್ರತಿಯೊಂದು ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಭಾವಚಿತ್ರದ ಜತೆಗೆ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರವನ್ನೂ ಹಾಕಬೇಕು ಎಂಬ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಜಲಮಂಡಳಿ, ಬೆಸ್ಕಾಂ, ಪೊಲೀಸ್‌, ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತರು ಪತ್ರ ಬರೆದಿದ್ದು, ಅಧಿಕಾರಿಗಳ ವಿವರವನ್ನು ನಾಮಫಲಕದಲ್ಲಿ ಕಡ್ಡಾಯವಾಗಿ ಹಾಕಬೇಕು ಎಂಬ ಸೂಚನೆ ನೀಡಿದ್ದಾರೆ’ ಎಂದರು.

‘ಬಿಬಿಎಂಪಿಯಿಂದ ಒಪ್ಪಿಗೆ ದೊರೆಯುವ ಮುನ್ನವೇ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿ ಅನಾವರಣ ಮಾಡಿದ ವಿಷಯವನ್ನು ಮಾಡಬೇಕಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.