ADVERTISEMENT

ಕಾರು ಡಿಕ್ಕಿ: ಎರಡು ವರ್ಷದ ಮಗು ಸಾವು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ಬೆಂಗಳೂರು: ಕಾರು ಡಿಕ್ಕಿ ಹೊಡೆದ ಪರಿಣಾಮ ಎರಡೂವರೆ ವರ್ಷದ ಹೆಣ್ಣು ಮಗು ಸಾವನ್ನಪ್ಪಿರುವ ದಾರುಣ ಘಟನೆ ಲಗ್ಗೆರೆ ಸಮೀಪದ ಲವಕುಶನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.

ಕಾರ್ಖಾನೆಯೊಂದರ ಉದ್ಯೋಗಿ ರಾಮಕೃಷ್ಣ ರೆಡ್ಡಿ ಎಂಬುವರ ಮಗಳು ದಿವ್ಯಾ ಮೃತಪಟ್ಟವಳು. ಮನೆಯ ಮುಂದೆ ರಾತ್ರಿ ಎಂಟು ಗಂಟೆ ಸುಮಾರಿಗೆ ದಿವ್ಯಾ ಆಟವಾಡುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಆಕೆಯ ಮೇಲೆ ಅದೇ ವಾಹನದ ಹಿಂದಿನ ಚಕ್ರ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಆಕೆ ಮೃತಪಟ್ಟಿದ್ದಾಳೆ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕೆ.ಆರ್. ಪುರ: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆ.ಆರ್. ಪುರದ ಐಟಿಐ ವೃತ್ತದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಕೆ.ಆರ್. ಪುರದ ಶ್ರೀನಿವಾಸ್ (24) ಮೃತಪಟ್ಟವರು. ಕೋಲಾರ ಜಿಲ್ಲೆಯವರಾದ ಶ್ರೀನಿವಾಸ್ ಫ್ಲವರ್ ಡೆಕೊರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬೈಕ್‌ನಲ್ಲಿ ರಾಮಮೂರ್ತಿನಗರದ ಕಡೆ ಹೋಗುತ್ತಿದ್ದ ವೇಳೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ಕೆ.ಆರ್. ಪುರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ
ಪಿಯುಸಿ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್. ಪುರದ ದೇವಸಂದ್ರದಲ್ಲಿ ಗುರುವಾರ ನಡೆದಿದೆ.

ಕೂಲಿ ಕಾರ್ಮಿಕ ಶ್ರೀರಾಮಪ್ಪ ಮತ್ತು ಲಕ್ಷ್ಮಮ್ಮ ಎಂಬುವರ ಪುತ್ರಿ ಮಂಜುಳಾ (18) ಆತ್ಮಹತ್ಯೆ ಮಾಡಿಕೊಂಡವರು. ಕೆ.ಆರ್. ಪುರದ ಸರ್ಕಾರಿ ಕಾಲೇಜಿನಲ್ಲಿ ಅವರು ಕಲಾ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಗುರುವಾರ ಪರೀಕ್ಷೆ ಬರೆದು ಮನೆಗೆ ಬಂದ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
`ಪೋಷಕರು ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ~ ಎಂದು ಕೆ.ಆರ್. ಪುರ ಠಾಣೆ ಇನ್‌ಸ್ಪೆಕ್ಟರ್ ವಿ.ಕೆ. ವಾಸುದೇವ ತಿಳಿಸಿದ್ದಾರೆ.

ಕಳವು ಯತ್ನ
ಇಂದಿರಾನಗರದ ನೂರು ಅಡಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕ್‌ನ ಎಟಿಎಂ ಯಂತ್ರ ಒಡೆದು ಕಳವು ಮಾಡಲು ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಘಟಕಕ್ಕೆ ನುಗ್ಗಿರುವ ಅಪರಿಚಿತ ವ್ಯಕ್ತಿಯೊಬ್ಬ ಯಂತ್ರವನ್ನು ಒಡೆದಿದ್ದಾನೆ. ಆದರೆ ಆತನಿಗೆ ಹಣ ದೋಚಲು ಸಾಧ್ಯವಾಗಿಲ್ಲ. ಎಟಿಎಂ ಘಟಕಕ್ಕೆ ಸೆಕ್ಯುರಿಟಿ ಗಾರ್ಡ್ ಇರಲಿಲ್ಲ. ಸಿ.ಸಿ. ಟಿ.ವಿ ಕ್ಯಾಮೆರಾದಲ್ಲಿ ಕಳವು ಯತ್ನ ದೃಶ್ಯಗಳು ದಾಖಲಾಗಿವೆ ಎಂದು ಪೊಲಿಸರು ತಿಳಿಸಿದ್ದಾರೆ. ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.