ADVERTISEMENT

ಕಾರು ಹರಿದು ಕಾರ್ಮಿಕನ ದುರ್ಮರಣ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST
ಕಾರು ಹರಿದು ಕಾರ್ಮಿಕನ ದುರ್ಮರಣ
ಕಾರು ಹರಿದು ಕಾರ್ಮಿಕನ ದುರ್ಮರಣ   

ಬೆಂಗಳೂರು: ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಕಾರು (ಎಸ್‌ಯುವಿ) ಹರಿದ ಪರಿಣಾಮ ಒಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಕಲ್ಯಾಣನಗರ ಸಮೀಪದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಕಿರುಬಗೆರೆ ಗ್ರಾಮದ ನಾಗರಾಜ್ (22) ಮೃತಪಟ್ಟವರು. ಅವರ ಸಂಬಂಧಿಕರಾದ ದೇವದುರ್ಗ ತಾಲ್ಲೂಕಿನ ಹನುಮಂತ (22), ಶಿವಯೋಗಿ (19), ಲಕ್ಷ್ಮಣ್‌ಗೌಡ (23) ಮತ್ತು ರಂಗಪ್ಪ (18) ಗಾಯಗೊಂಡಿದ್ದಾರೆ.

ನಾಗರಾಜ್ ಮತ್ತು ಗಾಯಾಳುಗಳು ಎಚ್‌ಆರ್‌ಬಿಆರ್ ಲೇಔಟ್ ಮೂರನೇ `ಎ~ ಮುಖ್ಯರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಅದರ ಸಮೀಪವೇ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದರು. ರಾತ್ರಿ ಸೆಕೆ ಹೆಚ್ಚಾಗಿದ್ದರಿಂದ ಆ ಐವರು ಶೆಡ್‌ನ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಮಲಗಿದ್ದರು.

ADVERTISEMENT

ರಾತ್ರಿ ಒಂದು ಗಂಟೆ ಸುಮಾರಿಗೆ ಅದೇ ಮಾರ್ಗವಾಗಿ ಬಂದ ಕಾರು (ನೋಂದಣಿ ಸಂಖ್ಯೆ ಕೆಎ-03, ಎಂಕ್ಯೂ-1369) ಅವರ ಮೇಲೆ ಹರಿಯಿತು. ವಾಹನದ ಮುಂಭಾಗಕ್ಕೆ ಸಿಲುಕಿದ ನಾಗರಾಜ್ ಅವರನ್ನು ಕಾರು ಸ್ವಲ್ಪ ದೂರ ಎಳೆದೊಯ್ದು ಸಮೀಪದ ಕಟ್ಟಡವೊಂದರ ಕಾಂಪೌಂಡ್‌ಗೆ ಗುದ್ದಿತು.

ಕಾಂಪೌಂಡ್ ಮತ್ತು ಕಾರಿನ ನಡುವೆ ಸಿಲುಕಿ ತೀವ್ರವಾಗಿ ಗಾಯಗೊಂಡ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ಇತರೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿ ಮನೆಗೆ ಮರಳಿದ್ದಾರೆ.

ನಾಗರಾಜ್, ಗಾಯಾಳುಗಳು ಹಾಗೂ ಅವರ ಇಬ್ಬರು ಸಂಬಂಧಿಕರು ಎರಡು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ನಗರದಲ್ಲೇ ನೆಲೆಸಿದ್ದರು. ನಾಗರಾಜ್ ಪತ್ನಿಗೆ ಐದು ದಿನಗಳ ಹಿಂದಷ್ಟೇ ಗಂಡು ಮಗು ಜನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಕಲಂ 279 (ಅಪಾಯಕಾರಿ ಚಾಲನೆ), ಕಲಂ 337 (ವ್ಯಕ್ತಿಯ ಪ್ರಾಣಕ್ಕೆ ಕುತ್ತು ತರುವುದು), ಕಲಂ 304ಎ (ಅಜಾಗರೂಕ ಚಾಲನೆ) ಹಾಗೂ ಮೋಟಾರು ವಾಹನ ಕಾಯ್ದೆ ಕಲಂ 187ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯದಲ್ಲೇ ಇಬ್ಬರ ಬಂಧನ: `ನಾಗರಾಜ್ ಮತ್ತು ಸಂಬಂಧಿಕರಿಗೆ ಅಪಘಾತ ಮಾಡಿದ ಕಾರಿನ ಮಾಲೀಕರ ಗುರುತು ಪತ್ತೆಯಾಗಿದೆ. ಕೊತ್ತನೂರು ನಿವಾಸಿ ರಾಘವೇಂದ್ರ ಪಟೇಲ್ ಉರುಫ್ ರಘು ಎಂಬುವರು ಆ ಕಾರಿನ ಮಾಲೀಕರು~ ಎಂದು ಪೂರ್ವ ಸಂಚಾರ ಉಪ ವಿಭಾಗದ ಎಸಿಪಿ ಎಚ್.ಕೆ.ವೆಂಕಟಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.

ರಘು ಸಂಬಂಧಿಕರಾದ ರವಿ ಎಂಬುವರು ಭಾನುವಾರ ರಾತ್ರಿ ಆ ಕಾರನ್ನು ತೆಗೆದುಕೊಂಡು ಹೋಗಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಯಾದ ರವಿ, ಸ್ನೇಹಿತೆ ಮಾಹಿ ಎಂಬುವರ ಜತೆ ಕಾರಿನಲ್ಲಿ ಕಮ್ಮನಹಳ್ಳಿ ಸಮೀಪದ ಹೋಟೆಲ್‌ಗೆ ಸ್ನೇಹಿತರೊಬ್ಬರ ಹುಟ್ಟುಹಬ್ಬ ಸಮಾರಂಭಕ್ಕೆ ಹೋಗಿದ್ದರು. ಹೋಟೆಲ್‌ನಿಂದ ಮನೆಗೆ ವಾಪಸ್ ಬರುತ್ತಿದ್ದಾಗ ಕಾರು ಚಾಲನೆ ಮಾಡುತ್ತಿದ್ದ ಮಾಹಿ ಅಪಘಾತ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಬಾಬೂಸಾಪಾಳ್ಯ ನಿವಾಸಿಯಾದ ಮಾಹಿ ತಲೆಮರೆಸಿಕೊಂಡಿದ್ದಾರೆ. ಅವರ ಮೊಬೈಲ್ ಕರೆಗಳ ಮಾಹಿತಿ ಕಲೆ ಹಾಕುತ್ತಿದ್ದು, ಸದ್ಯದಲ್ಲೇ ಬಂಧಿಸಲಾಗುತ್ತದೆ. ಘಟನೆ ನಡೆದಾಗ ಮಾಹಿ ಮತ್ತು ರವಿ ಪಾನಮತ್ತರಾಗಿದ್ದರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ, ಇಬ್ಬರೂ ಪಾನಮತ್ತರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ಕೊಟ್ಟಿದ್ದಾರೆ ಎಂದು ವೆಂಕಟಸ್ವಾಮಿ ಹೇಳಿದರು.

ಮಹಿಳೆಯೇ ಚಾಲನೆ ಮಾಡುತ್ತಿದ್ದರು: `ಕಾರು ಚಾಲನೆ ಮಾಡುತ್ತಿದ್ದ ಮಹಿಳೆ ಅಪಘಾತ ಸಂಭವಿಸುತ್ತಿದ್ದಂತೆ ವಾಹನದಿಂದ ಕೆಳಗಿಳಿದರು. ಅವರ ಹಿಂದೆಯೇ ಯುವಕನೊಬ್ಬ ಕೆಳಗಿಳಿದು ಕಾರಿನ ಒಳ ಹೋಗಿ ವಾಹನವನ್ನು ಹಿಮ್ಮುಖವಾಗಿ ಚಾಲನೆ ಮಾಡಿ ನಿಲ್ಲಿಸಿದ. ಬಳಿಕ ಅವರಿಬ್ಬರೂ ಪರಾರಿಯಾದರು~ ಎಂದು ಗಾಯಾಳು ಹನುಮಂತ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.