ADVERTISEMENT

ಕಾರ್ಟೊಸ್ಯಾಟ್‌–3 ಉಪಗ್ರಹ ಅಭಿವೃದ್ಧಿ

ಬಾಹ್ಯಾಕಾಶ ವಿಜ್ಞಾನ ಕುರಿತ ಉಪನ್ಯಾಸದಲ್ಲಿ ಇಸ್ರೊ ನಿವೃತ್ತ ವಿಜ್ಞಾನಿ ಪಿ.ಜೆ.ಭಟ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ಕಾರ್ಟೊಸ್ಯಾಟ್‌–3 ಉಪಗ್ರಹ ಅಭಿವೃದ್ಧಿ
ಕಾರ್ಟೊಸ್ಯಾಟ್‌–3 ಉಪಗ್ರಹ ಅಭಿವೃದ್ಧಿ   

ಬೆಂಗಳೂರು: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಕಾರ್ಟೊಸ್ಯಾಟ್‌–3 ದೂರಸಂವೇದಿ ಉಪಗ್ರಹವನ್ನು ಅಭಿವೃದ್ಧಿಪಡಿಸುತ್ತಿದ್ದು, 2018ರಲ್ಲಿ ಉಡಾವಣೆ ಮಾಡುವ ಸಾಧ್ಯತೆ ಇದೆ’ ಎಂದು ಇಸ್ರೊ ನಿವೃತ್ತ ವಿಜ್ಞಾನಿ ಪಿ.ಜೆ.ಭಟ್‌ ತಿಳಿಸಿದರು.

ಜಯನಗರದ ನ್ಯಾಷನಲ್‌ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಬಾಹ್ಯಾಕಾಶ ವಿಜ್ಞಾನ’ ಕುರಿತು ಅವರು ಉಪನ್ಯಾಸ          ನೀಡಿದರು.

‘ಕಾರ್ಟೊಸ್ಯಾಟ್–2 ಉಪಗ್ರಹವನ್ನು ಇತ್ತೀಚೆಗೆ ಉಡಾವಣೆ ಮಾಡಲಾಗಿತ್ತು. ಅದು ಗರಿಷ್ಠ 0.6 ಮೀಟರ್‌ ಅಳತೆಯ ಜಾಗದ ಚಿತ್ರವನ್ನೂ ಸೆರೆಹಿಡಿಯುವ ಸಾಮರ್ಥ್ಯ ಹೊಂದಿತ್ತು. ಇದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಹಾಗೂ ಸ್ಪಷ್ಟ ಚಿತ್ರಗಳನ್ನು ಕಾರ್ಟೊಸ್ಯಾಟ್–3 ಸೆರೆ ಹಿಡಿಯಲಿದೆ. ಇದರಿಂದ ನೆಲದ ಮೇಲಿರುವ ಸಣ್ಣ–ಪುಟ್ಟ ವಸ್ತುಗಳನ್ನೂ ಉಪಗ್ರಹದ ಮೂಲಕವೇ ಪತ್ತೆ ಮಾಡಬಹುದು. ಇದು ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲಿದೆ’ ಎಂದರು.

ADVERTISEMENT

‘ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್‌-1 ಉಪಗ್ರಹ ಸಿದ್ಧಗೊಳಿಸಲಾಗುತ್ತಿದ್ದು, 2019ಕ್ಕೆ ಉಡಾವಣೆ ಮಾಡುವ ಸಾಧ್ಯತೆ ಇದೆ. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿ ಉಪಗ್ರಹವನ್ನು ಸ್ಥಾಪಿಸಲಾಗುತ್ತದೆ. ಭೂಮಿಯ ಜತೆಗೆ ಸಮಾನಾಂತರವಾಗಿ ಚಲಿಸಿ ಸೂರ್ಯನಲ್ಲಿ ಆಗುತ್ತಿರುವ ಪ್ರಕ್ರಿಯೆಗಳ ಅಧ್ಯಯನ ನಡೆಸಲಿದೆ. ಸೂರ್ಯ ಜ್ವಾಲೆ, ಕರೋನ ಜತೆಗೆ ಹವಾಮಾನ ಅಧ್ಯಯನಕ್ಕೂ ಇದು ಅನುಕೂಲವಾಗಲಿದೆ’ ಎಂದು ವಿವರಿಸಿದರು.

‘ಹವಾಮಾನ ಮುನ್ಸೂಚನೆ ಹಾಗೂ ಮೀನುಗಾರಿಕೆ ಬಗ್ಗೆ ಮಾಹಿತಿ ನೀಡುವ ಓಷನ್‌ಸ್ಯಾಟ್‌–3 ಅಭಿವೃದ್ಧಿ ಪಡಿಸಲಾಗುತ್ತಿದೆ. ಇದು ಓಷನ್‌ಸ್ಯಾಟ್‌–2 ಸರಣಿಯ ಮುಂದುವರಿದ ಹಾಗೂ ಸುಧಾರಿತ ಉಪಗ್ರಹ. ಸಮುದ್ರದಲ್ಲಿ ಯಾವ ಭಾಗದಲ್ಲಿ ಹೆಚ್ಚು ಮೀನುಗಳಿವೆ ಎಂಬುದನ್ನು ನಿಖರವಾಗಿ ಗುರುತಿಸಿ ಮಾಹಿತಿ ರವಾನಿಸಲಿದೆ’ ಎಂದರು.

‘ಜಿಸ್ಯಾಟ್‌ ಉಪಗ್ರಹಗಳನ್ನು ಡಿಜಿಟಲ್ ಆಡಿಯೊ, ಮಾಹಿತಿ ಮತ್ತು ವಿಡಿಯೊ ಪ್ರಸಾರ, ಇವುಗಳಿಗಾಗಿ ಬಳಸಲಾಗುತ್ತದೆ. ಇಸ್ರೊದ ಬಳಿ ಈಗಾಗಲೇ 180 ಟ್ರಾನ್ಸ್‌ಪಾಂಡರ್‌ಗಳು ಇದ್ದವು. ಇತ್ತೀಚೆಗೆ ಜಿಸ್ಯಾಟ್‌ನಲ್ಲಿ ಉಡಾವಣೆ ಮಾಡಲಾಗಿರುವ 48 ಟ್ರಾನ್ಸ್‌ಪಾಂಡರ್‌ಗಳು ದೇಶದ ದೂರಸಂಪರ್ಕ ಸಾಮರ್ಥ್ಯವನ್ನು ಮೇಲ್ದರ್ಜೆಗೆ ಏರಿಸಲಿವೆ’ ಎಂದರು.

ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯ ಅಧ್ಯಕ್ಷ ಡಾ.ಎ.ಎಚ್‌. ರಾಮರಾವ್‌, ‘ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುತ್ತಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಉಪನ್ಯಾಸ ಏರ್ಪಡಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.