ADVERTISEMENT

ಕಾರ್ಪೊರೇಟರ್‌ಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 20:00 IST
Last Updated 3 ಡಿಸೆಂಬರ್ 2012, 20:00 IST

ಬೆಂಗಳೂರು: ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಒಳಗಾಗಿ ಸದ್ಯಕ್ಕೆ ಕಾರಾಗೃಹದಲ್ಲಿ ಇರುವ ಗಣೇಶ ಮಂದಿರ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಎಲ್. ಗೋವಿಂದರಾಜು ಅವರಿಗೆ ಹೈಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ನೀಡಿದೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶ ಅಮಾನತಿನಲ್ಲಿ ಇಡಬೇಕು, ತಮಗೆ ಜಾಮೀನು ನೀಡಬೇಕು ಎಂದು ಕೋರಿ ಗೋವಿಂದರಾಜು ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ವೇಳೆ ವಾದ ಮಂಡಿಸಿದ ಗೋವಿಂದರಾಜು ಪರ ವಕೀಲರು, `ಕೆಳ ಹಂತದ ನ್ಯಾಯಾಲಯಗಳ ಆದೇಶವನ್ನು ಅಮಾನತಿನಲ್ಲಿ ಇಡುವ ಅಧಿಕಾರ ಹೈಕೋರ್ಟ್‌ಗೆ ಇದೆ.

ADVERTISEMENT

ಸುಪ್ರೀಂ ಕೋರ್ಟ್ ಕೂಡ ವಿವಿಧ ಸಂದರ್ಭಗಳಲ್ಲಿ ಇದೇ ಮಾತು ಹೇಳಿದೆ. ಗೋವಿಂದರಾಜು ಅವರಿಗೆ ನೀಡಿರುವ ಶಿಕ್ಷೆಯನ್ನು ಅಮಾನತಿನಲ್ಲಿ ಇಡಲು ಸಾಕಷ್ಟು ಕಾರಣಗಳು ಇವೆ' ಎಂದರು.

ಅವರ ವಾದವನ್ನು ವಿರೋಧಿಸಿದ ಲೋಕಾಯುಕ್ತ ಪರ ವಕೀಲರು, `ಪ್ರಕರಣದ ಗಾಂಭೀರ್ಯತೆ ಪರಿಗಣಿಸಿ ಗೋವಿಂದರಾಜು ಅವರಿಗೆ ಜಾಮೀನು ನೀಡಬಾರದು. ಜಾಮೀನು ದೊರೆತರೆ ಅವರಿಂದ ದೂರುದಾರ ಉದಯ ಕುಮಾರ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಅಪಾಯ ಎದುರಾಗಬಹುದು' ಎಂದು ವಾದಿಸಿದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಪೀಠ, ಲೋಕಾಯುಕ್ತ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಅಮಾನತಿನಲ್ಲಿ ಇರಿಸಿತು. ಎರಡು ಲಕ್ಷ ರೂಪಾಯಿ ಮೌಲ್ಯದ ಬಾಂಡ್ ನೀಡಬೇಕು, ಇಬ್ಬರ ವೈಯಕ್ತಿಕ ಭದ್ರತೆ ನೀಡಬೇಕು, ಪಾಸ್‌ಪೋರ್ಟ್ ಅನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು, ಅನುಮತಿ ಇಲ್ಲದೆ ರಾಜ್ಯ ಬಿಟ್ಟು ತೆರಳಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ, ಗೋವಿಂದರಾಜು ಅವರಿಗೆ ವಿಧಿಸಿದೆ.

ದೇವಸ್ಥಾನ ಟ್ರಸ್ಟ್‌ಗೆ ನೋಟಿಸ್
ಬೆಂಗಳೂರಿನ ವಿಜಯನಗರದ ಮಾರುತಿ ಭಕ್ತ ಮಂಡಳಿ ಟ್ರಸ್ಟ್‌ನ ಅಧ್ಯಕ್ಷರಿಗೆ ನೋಟಿಸ್ ಜಾರಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ಆದೇಶಿಸಿದೆ.

`ಟ್ರಸ್ಟಿನವರು ದೇವಸ್ಥಾನದ ಹುಂಡಿ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು' ಎಂದು ಟಿ.ಎನ್. ನಂಜುಂಡಪ್ಪ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

ಟ್ರಸ್ಟ್‌ನ ಆಡಳಿತದಲ್ಲಿರುವ ದೇವಸ್ಥಾನವನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಡಾ.ವಿ.ಎಸ್. ಆಚಾರ್ಯ ಅವರು 2010ರಲ್ಲಿ ಮುಜರಾಯಿ ಸಚಿವರಾಗಿದ್ದಾಗ ಲಿಖಿತ ಸೂಚನೆ ನೀಡಿದ್ದರು. ಆ ಸೂಚನೆ ಇನ್ನೂ ಜಾರಿಗೆ ಬಂದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ವಿಚಾರಣೆಯನ್ನು ಫೆಬ್ರುವರಿ 6ಕ್ಕೆ ಮುಂದೂಡಲಾಗಿದೆ.

ಖುದ್ದು ಹಾಜರಿಗೆ ಆದೇಶ
ಶಿಕ್ಷಣ ಹಕ್ಕು ಕಾಯ್ದೆಗೆ (ಆರ್‌ಟಿಇ) ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ನೇತೃತ್ವದ ಏಕಸದಸ್ಯ ಪೀಠ, ಮಂಗಳವಾರ ಖುದ್ದು ಹಾಜರಾಗುವಂತೆ ಪ್ರಾಥಮಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ನಿರ್ದೇಶಕರಿಗೆ  ಆದೇಶಿಸಿದೆ.

ಮಹಮದ್ ಅಸ್ಲಾಂ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, `ಆಯುಕ್ತರು ಹಾಗೂ ನಿರ್ದೇಶಕರು ಮಂಗಳವಾರ ಹಾಜರಾಗಿ, ಆರ್‌ಟಿಇ ಅನ್ವಯ ಶೇ 25ರಷ್ಟು ಉಚಿತ ಸೀಟುಗಳ ಕೋಟಾ ಅಡಿ ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳ ಶಿಕ್ಷಣಕ್ಕೆ ಆಗುವ ವೆಚ್ಚವನ್ನು ಆಡಳಿತ ಮಂಡಳಿಗಳಿಗೆ ಸರ್ಕಾರ ಹೇಗೆ ಪಾವತಿಸುತ್ತಿದೆ ಎಂಬ ವಿವರ ನೀಡಬೇಕು' ಎಂದು ಸೂಚನೆ ನೀಡಿದೆ.

ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಶುಲ್ಕ ವಸೂಲು ಮಾಡುವಂತಿಲ್ಲ ಎಂಬ ನಿಯಮವನ್ನು ಖಾಸಗಿ ಸಂಸ್ಥೆಗಳು ಉಲ್ಲಂಘಿಸುತ್ತಿವೆ. `ಕಡ್ಡಾಯ ಹಾಗೂ ಉಚಿತ ಶಿಕ್ಷಣ ಮಕ್ಕಳ ಹಕ್ಕು' ಎಂದು ಹೇಳುತ್ತಿರುವ ಸರ್ಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ ದೊರೆಯುವಂಥ ವ್ಯವಸ್ಥೆ ಕಲ್ಪಿಸಬೇಕು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ಪಾಲಿಕೆ ಆಯುಕ್ತರಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ದೂರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್, ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿಗೆ ಆದೇಶಿಸಿದೆ.

ಎ. ಮಂಜುಳಾ ಎಂಬುವವರು ಸಲ್ಲಿಸಿರುವ ಈ ಹೊಸ ಅರ್ಜಿಯಲ್ಲಿ, `ಪೌರಕಾರ್ಮಿಕರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ' ಎಂದೂ ಆರೋಪ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ.

ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಸಂಬಂಧಿಸಿದಂತೆ ವಕೀಲ ಜಿ.ಆರ್. ಮೋಹನ್ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಈಗಾಗಲೇ ನಡೆಸುತ್ತಿರುವ ವಿಭಾಗೀಯ ಪೀಠ, ಸರ್ಕಾರ ಹಾಗೂ ಬಿಬಿಎಂಪಿಯ ಧೋರಣೆಯನ್ನು ಅನೇಕ ಬಾರಿ ತರಾಟೆಗೆ ತೆಗೆದುಕೊಂಡಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಕೋರ್ಟ್ ನೀಡಿದ ಆದೇಶ ಪಾಲಿಸದಿದ್ದರೆ, ನ್ಯಾಯಾಂಗ ನಿಂದನೆ ಮೊಕದ್ದವೆು ದಾಖಲಿಸಬೇಕಾಗುತ್ತದೆ ಎಂದು ಪೀಠ ಈ ಹಿಂದೆ ಗಂಭೀರ ಎಚ್ಚರಿಕೆಯನ್ನೂ ನೀಡಿತ್ತು.

`ತ್ಯಾಜ್ಯ ನಿರ್ವಹಣೆ ಮಾಡಲು ಪರಿಸರ ಸ್ನೇಹಿ, ವೈಜ್ಞಾನಿಕ ಹಾಗೂ ಮಿತವ್ಯಯಕಾರಿ ಪದ್ಧತಿಯನ್ನು ಬಿಬಿಎಂಪಿ ರೂಪಿಸಿಲ್ಲ. ಸಮಸ್ಯೆ ನಿವಾರಣೆ ಸಂಬಂಧ ಬಿಬಿಎಂಪಿ ಅಧಿಕಾರಿಗಳು ನ್ಯಾಯಾಲಯವನ್ನೂ ತಪ್ಪುದಾರಿಗೆ ಎಳೆಯುತ್ತಿದ್ದಾರೆ' ಎಂದು ಮಂಜುಳಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ದೂರಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೂ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.