ADVERTISEMENT

ಕಾರ್ಪೋರೇಟರ್ ಸೇರಿ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಮೇ 2018, 20:09 IST
Last Updated 9 ಮೇ 2018, 20:09 IST
ಜಿ.ಕೆ.ವೆಂಕಟೇಶ್
ಜಿ.ಕೆ.ವೆಂಕಟೇಶ್   

ಬೆಂಗಳೂರು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಚುನಾವಣಾ ಗುರುತಿನ ಚೀಟಿಗಳನ್ನು ಪತ್ತೆ ಹಚ್ಚಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಯಶವಂತಪುರ ಕಾರ್ಪೋರೇಟರ್ ಜಿ.ಕೆ.ವೆಂಕಟೇಶ್ ಸೇರಿದಂತೆ ಐವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಜಾಲಹಳ್ಳಿಯ ‘ಎಸ್ಎಲ್‌‌‌ವಿ’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲಿದ್ದ ಚೀಟಿಗಳ ಬಗ್ಗೆ ಮಾಹಿತಿ ಪಡೆದಿದ್ದ ಬಿಜೆಪಿ ಕಾರ್ಯಕರ್ತ ರಾಕೇಶ್‌, ಸ್ಥಳಕ್ಕೆ ಹೋಗಿ ಪ್ರಶ್ನಿಸಿದ್ದರು. ನಂತರ, ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿ ಚೀಟಿಗಳನ್ನು ಪತ್ತೆ ಹಚ್ಚಿದ್ದರು.

ಫ್ಲ್ಯಾಟ್‌ನೊಳಗೆ ಹೋಗಿದ್ದಕ್ಕಾಗಿ ರಾಕೇಶ್‌ ಜತೆ ಜಗಳ ತೆಗೆದಿದ್ದ ವೆಂಕಟೇಶ್‌ ಹಾಗೂ ಅವರ ಬೆಂಬಲಿಗರು, ಹಲ್ಲೆ ಮಾಡಿದ್ದರು. ಅದನ್ನು ಬಿಡಿಸಲು ಬಂದವರಿಗೆ ಜೀವ ಬೆದರಿಕೆವೊಡ್ಡಿದ್ದರು. ಈ ಸಂಬಂಧ ರಾಕೇಶ್‌ ನೀಡಿದ್ದ ದೂರಿನನ್ವಯ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು, ವೆಂಕಟೇಶ್‌ ಜತೆಗೆ ರಘು, ಮಂಜುನಾಥ್, ಮೋಹನ್‌ ಹಾಗೂ ಕಿರಣ್ ಸುನಂದ ಎಂಬುವರನ್ನೂ ಬಂಧಿಸಿದ್ದಾರೆ.

ADVERTISEMENT

‘ಹಲ್ಲೆ, ಗಲಭೆ, ಬೆದರಿಕೆವೊಡ್ಡಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಬಂಧಿತರನ್ನು 7ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಭದ್ರತಾ ಸಿಬ್ಬಂದಿ ವಶಕ್ಕೆ: ಅಕ್ರಮವಾಗಿ ಗುರುತಿನ ಚೀಟಿಗಳನ್ನು ಸಂಗ್ರಹಿಸಿದ್ದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಅಪಾರ್ಟ್‌ಮೆಂಟ್‌ ಸಮುಚ್ಚಯದ ಭದ್ರತಾ ಸಿಬ್ಬಂದಿಯನ್ನು ಬುಧವಾರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಭದ್ರತಾ ಸಿಬ್ಬಂದಿಯ ಕೊಠಡಿಯಲ್ಲೂ ಚೀಟಿಗಳು ಇರುವುದು ಪತ್ತೆಯಾಗಿದೆ. ಅವುಗಳ ಪರಿಶೀಲನೆ ಪ್ರಗತಿಯಲ್ಲಿದೆ. ಸದ್ಯಕ್ಕೆ ಸೆಕ್ಯುರಿಟಿ ಸಿಬ್ಬಂದಿ ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಚುನಾವಣಾಧಿಕಾರಿ ದೂರು ನೀಡುತ್ತಿದ್ದಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.