ADVERTISEMENT

ಕಾರ್ಮಿಕರ ಮಸೂದೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಮೇ 2012, 19:30 IST
Last Updated 17 ಮೇ 2012, 19:30 IST

ಬೆಂಗಳೂರು: `ಅಸಂಘಟಿತ ಕಾರ್ಮಿಕರ ಮಸೂದೆ~ಯನ್ನು ದೇಶದಾದ್ಯಂತ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿ ನ್ಯಾಷನಲ್ ಸೆಂಟರ್ ಫಾರ್ ಲೇಬರ್ (ಎನ್‌ಸಿಎಲ್) ಸಂಘಟನೆಯ ಕಾರ್ಯಕರ್ತರು  ಪುರಭವನದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಎನ್‌ಸಿಎಲ್‌ನ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಸಾಮಿ ಮಾತನಾಡಿ `ಕಾರ್ಮಿಕರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ 2008ರಲ್ಲಿ ಅಸಂಘಟಿತ ಕಾರ್ಮಿಕರ ಮಸೂದೆಯನ್ನು ಜಾರಿಗೆ ತಂದಿದೆ.

ಆದರೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳು ಈ ಕಾನೂನನ್ನು ಜಾರಿಗೊಳಿಸಿಲ್ಲ.

ಇದರಿಂದ ದೇಶದ ಸುಮಾರು 45 ಕೋಟಿಗೂ ಹೆಚ್ಚಿನ ಅಸಂಘಟಿತ ಕಾರ್ಮಿಕರು ಸಾಮಾಜಿಕ ಭದ್ರತೆಯಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು~ ಎಂದು ಒತ್ತಾಯಿಸಿದರು.

`ದೇಶದ ಒಟ್ಟು ಆದಾಯಕ್ಕೆ ಕಾರ್ಮಿಕರೇ ಶೇ 65 ರಷ್ಟು ಕೊಡುಗೆ ನೀಡುತ್ತಿದ್ದಾರೆ. ಆದರೆ, ಶೇ 5 ರಷ್ಟೂ ಭದ್ರತೆ ಕಾರ್ಮಿಕರಿಗಿಲ್ಲ. ಕೆಲಸ ಮಾಡುವ ವೇಳೆ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಹಣ ನೀಡಬೇಕು. ಪ್ರತಿ ತಿಂಗಳು ಕನಿಷ್ಠ ಎರಡು ಸಾವಿರ ರೂಪಾಯಿ ಪಿಂಚಣಿ ನೀಡಬೇಕು. ಆಹಾರ, ವಸತಿ, ಆರೋಗ್ಯ, ಬಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು ಎಂದರು.

ವಿದೇಶಿ ನೇರ ಬಂಡವಾಳ ಹೂಡಿಕೆಯಂತಹ ನೀತಿಗಳಿಂದ ಸಣ್ಣ ವ್ಯಾಪಾರಿಗಳು ಬೀದಿಗೆ ಬಂದಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಕಾರ್ಮಿಕರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.