ADVERTISEMENT

ಕಾರ್ಯಪ್ಪ ಆದರ್ಶ ಪಾಲನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 19:30 IST
Last Updated 28 ಜನವರಿ 2012, 19:30 IST
ಕಾರ್ಯಪ್ಪ ಆದರ್ಶ ಪಾಲನೆಗೆ ಸಲಹೆ
ಕಾರ್ಯಪ್ಪ ಆದರ್ಶ ಪಾಲನೆಗೆ ಸಲಹೆ   

ಬೆಂಗಳೂರು: `ಕೊಡವರ ಘನತೆ-ಗೌರವವನ್ನು ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿಶ್ವಮಟ್ಟಕ್ಕೆ ಏರಿಸಿದ ಕೀರ್ತಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಸಲ್ಲುತ್ತದೆ~ ಎಂದು ನಿವೃತ್ತ ಮೇಜರ್ ಜನರಲ್ ಮಾದೆಯಂಡ ಎಂ. ಬೆಳ್ಳಿಯಪ್ಪ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.

ಬೆಂಗಳೂರು ಕೊಡವ ಸಮಾಜವು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರ 113ನೇ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ `ಕೊಡವ ಸಾಂಸ್ಕೃತಿಕ ದಿನ~ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

`ಸೇನೆಯ ಹಲವು ಅತ್ಯುನ್ನತ ಹುದ್ದೆಗಳನ್ನು ಮೊದಲು ಅಲಂಕರಿಸಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಶಿಸ್ತು-ಸಂಯಮ, ಕರ್ತವ್ಯ ನಿಷ್ಠೆ, ಬದ್ಧತೆ, ದೇಶಾಭಿಮಾನ ಹಾಗೂ ಸೇವಾತತ್ಪರತೆಗೆ ಹೆಸರುವಾಸಿಯಾಗಿದ್ದರು. ಹೀಗಾಗಿ, ಸೇನೆಯಲ್ಲಿ ಕೆಲಸ ನಿರ್ವಹಿಸಿದ ಕೊಡಗಿನ ಅನೇಕ ಯೋಧರಿಗೆ ಕಾರ್ಯಪ್ಪನವರ ಹೆಸರಿನಿಂದಲೇ ಒಳ್ಳೆಯ ಸ್ಥಾನಮಾನ ಹಾಗೂ ಜವಾಬ್ದಾರಿ ಸಿಗಲು ಸಹಕಾರಿಯಾಯಿತು~ ಎಂದು ಹೇಳಿದರು.

`ಮಹಾರಾಷ್ಟ್ರಕ್ಕೆ ಶಿವಾಜಿ, ಪಶ್ಚಿಮ ಬಂಗಾಳಕ್ಕೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಹೇಗೋ ಕೊಡವರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕೂಡ ಹಾಗೇ. ನಮ್ಮ ಮುಂದಿನ ಪೀಳಿಗೆ ಇಂತಹ ಮಹಾನ್ ನಾಯಕನ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು~ ಎಂದ ಅವರು ಕರೆ ನೀಡಿದರು.

`ದೇಶದ ಉದ್ಧಾರಕ್ಕಾಗಿ ಸದಾ ಹಂಬಲಿಸುತ್ತಿದ್ದ ಕಾರ್ಯಪ್ಪನವರು ಮಾನವೀಯತೆಯ ಹರಿಕಾರರೂ ಆಗಿದ್ದರು. ಹೀಗಾಗಿ, ಅವರು ಕಾರ್ಮಿಕರನ್ನು ಕೂಡ ಅತ್ಯಂತ ಗೌರವಯುತವಾಗಿ ಕಾಣುತ್ತಿದ್ದರು. ಕಾರ್ಯಪ್ಪನವರ ಸೇವಾ ಮನೋಭಾವ ಕೊಡವರೆಲ್ಲರಿಗೂ ಸದಾ ಸ್ಫೂರ್ತಿ~ ಎಂದರು.

ಸಮಾರಂಭದಲ್ಲಿ ಬ್ರಿಗೇಡಿಯರ್, ಸಿ.ಕ್ಯು.ಎ.ಎಲ್.ನ ಕಂಟ್ರೋಲರ್ ಕಾಳೇಂಗಡ ಸಿ. ಕಾರ್ಯಪ್ಪ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಕೊಡಗಿನ ಯೋಧ ಕುಟ್ಟಂಡ ಲವ ಅವರನ್ನು ಸನ್ಮಾನಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಚೆಪ್ಪುಡಿರ ಎಂ. ಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಕುಕ್ಕೇರ ಬಿ. ಜಯ ಅಪ್ಪಣ್ಣ, ಉಪಾಧ್ಯಕ್ಷೆ ಸೀತಾ ಅಯ್ಯಣ್ಣ, ಪದಾಧಿಕಾರಿಗಳಾದ ಕೈಬುಳೀರ ಕೆ. ಪೂಣಚ್ಚ, ಮಲ್ಲೇಂಗಡ ಸುಧಾ ಮುತ್ತಣ್ಣ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಡಾ. ಬೊಜ್ಜಂಗಡ ಅವನಿಜಾ ಸೋಮಯ್ಯ ರಚಿತ `ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ~ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಆನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.