ADVERTISEMENT

ಕಾವ್ಯ ಸ್ವಯಂಪ್ರಭೆಯುಳ್ಳದ್ದು: ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಜನವರಿ 2013, 19:59 IST
Last Updated 17 ಜನವರಿ 2013, 19:59 IST
ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ `ಕಾವ್ಯ ಸಂಕ್ರಾಂತಿ' ಕಾರ್ಯಕ್ರಮದಲ್ಲಿ ಕವಿ ಡಾ.ಎಲ್. ಹನುಮಂತಯ್ಯ ಮಾತನಾಡಿದರು. ಸಾಹಿತ್ಯ ಸಮುದಾಯದ ರಾಜ್ಯ ಸಹ ಕಾರ್ಯದರ್ಶಿ ಕೆ.ಎಸ್.ವಿಮಲಾ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್,  ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಚಿತ್ರದಲ್ಲಿದ್ದಾರೆ 	-ಪ್ರಜಾವಾಣಿ ಚಿತ್ರ
ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ `ಕಾವ್ಯ ಸಂಕ್ರಾಂತಿ' ಕಾರ್ಯಕ್ರಮದಲ್ಲಿ ಕವಿ ಡಾ.ಎಲ್. ಹನುಮಂತಯ್ಯ ಮಾತನಾಡಿದರು. ಸಾಹಿತ್ಯ ಸಮುದಾಯದ ರಾಜ್ಯ ಸಹ ಕಾರ್ಯದರ್ಶಿ ಕೆ.ಎಸ್.ವಿಮಲಾ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಚಿತ್ರದಲ್ಲಿದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾವ್ಯ ಸ್ವಯಂಪ್ರಭೆಯುಳ್ಳದ್ದು. ಕಾವ್ಯವನ್ನು ಯಾರೂ ನಿಯಂತ್ರಿಸಲು ಅಥವಾ ಒತ್ತಾಯಪೂರ್ವಕವಾಗಿ ಬರೆಸಲು ಸಾಧ್ಯವಿಲ್ಲ. ಕಾವ್ಯ ತನ್ನಿಂದ ತಾನೇ ಹುಟ್ಟುವಂತದ್ದು ಎಂದು ಕವಿ ಡಾ.ಎಲ್.ಹನುಮಂತಯ್ಯ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಗುರುವಾರ ಏರ್ಪಡಿಸಿದ್ದ `ಕಾವ್ಯ ಸಂಕ್ರಾಂತಿ' ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕವಿಯಾದವನಿಗೆ ಬದುಕಿನ ಬಗ್ಗೆ ಶ್ರದ್ಧೆ ಇರಬೇಕು. ಆಗ ಕಾವ್ಯ ಅವನೊಳಗೆ ತನ್ನಿಂದ ತಾನೇ ಜೀವ ಪಡೆಯುತ್ತದೆ. ಕವಿಯಾದವನು ಒಳ್ಳೆಯ ವಿಮರ್ಶಕನಾಗಬೇಕು. ಆಗಲೇ ಅವನಿಂದ ಒಳ್ಳೆಯ ಕಾವ್ಯ ಹುಟ್ಟಲು ಸಾಧ್ಯವಾಗುತ್ತದೆ ಎಂದರು.

ನಾಡಿನ ಪರಿಸ್ಥತಿ ಮತ್ತು ಸಮಾಜದ ಹೀನಾಯ ಪರಿಸ್ಥಿತಿ ಕವಿಯನ್ನು ಮೂಕನನ್ನಾಗಿ ಮಾಡಿದೆ. ಇಂತಹ ಸಂದರ್ಭದಲ್ಲಿ ಕವಿ ಸುಂದರ ನಾಡು ಅಥವಾ ಮಾನವೀಯತೆಯನ್ನು ಬಿಂಬಿಸುವಂತಹ ಕವನಗಳನ್ನು ಬರೆಯಲು ಸಾಧ್ಯವಿಲ್ಲ ಎಂದು ವಿಷಾದಿಸಿದರು.

ವೇದ- ಉಪನಿಷತ್ತುಗಳಿರುವ, ಸ್ತ್ರೀಯನ್ನು ಅತಿ ಪೂಜನೀಯಳು ಎಂದು ಭಾವಿಸಿ ಪೂಜಿಸುವ ನಾಡಿನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತಿವೆ. ಶತಮಾನಗಳ ಹಿಂದಿನ ಮಹಿಳೆಯರ ಸ್ಥಿತಿ ಮತ್ತು ಇಂದಿನ ಮಹಿಳೆಯರ ಸ್ಥಿತಿ ಭಿನ್ನವಾಗಿಲ್ಲ. ನಮ್ಮ ಸಮಾಜವು ಅಧಃಪತನದ ಹಾದಿ ಹಿಡಿದಿದೆ. ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ನಡೆದ ಮೇಲೆ ಮನೋವ್ಯಾಧಿಯಂತೆ ಮತ್ತೆ ಮತ್ತೆ ಅತ್ಯಾಚಾರ ನಡೆದ ಪ್ರಕರಣಗಳು ದಾಖಲಾದವು ಎಂದರು.

ನಮ್ಮ ಸುತ್ತಲಿನ ಸಮಾಜವು ಆರೋಗ್ಯಪೂರ್ಣವಾಗಿದ್ದರೆ ಮಾತ್ರ ಒಳ್ಳೆಯ ಕಾವ್ಯ ಹಾಗೂ ಸಾಹಿತ್ಯ ಹುಟ್ಟುತ್ತದೆ. ಇಲ್ಲವಾದರೆ, ಸಮಾಜದ ವಿಷಯಗಳನ್ನು ರೋಚಕವಾಗಿ ಬರೆಯಲು ಮಾತ್ರ ಸಾಧ್ಯವಾಗಬಹುದು ಎಂದು ಹೇಳಿದರು.

ಕವಿಗೋಷ್ಠಿಯಲ್ಲಿ ಸಾಹಿತಿ ಬಿ.ಟಿ.ಲಲಿತಾನಾಯಕ್, ದು. ಸರಸ್ವತಿ ಮತ್ತಿತರ ಕವಿಗಳು ಕವನ ವಾಚನ ಮಾಡಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.