ADVERTISEMENT

ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ: ರೋಗಿಗಳ ಸಂಬಂಧಿಕರಿಗೆ ಪ್ರತಿದಿನ ಮಧ್ಯಾಹ್ನದ ಊಟ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 19:30 IST
Last Updated 5 ಡಿಸೆಂಬರ್ 2017, 19:30 IST
ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ ಪೀಡಿತ ರೋಗಿಗಳು ಹಾಗೂ ಸಂಬಂಧಿಕರಿಗೆ  ಕೆ.ಆರ್‌.ರಮೇಶ್‌ ಕುಮಾರ್‌ ಊಟ ಬಡಿಸಿದರು. ಡಾ.ಕೆ.ಬಿ.ಲಿಂಗೇಗೌಡ, ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷ ಶ್ರೀಚಂದ್‌ ರಾಜಪಾಲ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ ಪೀಡಿತ ರೋಗಿಗಳು ಹಾಗೂ ಸಂಬಂಧಿಕರಿಗೆ ಕೆ.ಆರ್‌.ರಮೇಶ್‌ ಕುಮಾರ್‌ ಊಟ ಬಡಿಸಿದರು. ಡಾ.ಕೆ.ಬಿ.ಲಿಂಗೇಗೌಡ, ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷ ಶ್ರೀಚಂದ್‌ ರಾಜಪಾಲ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸತ್ಯ ಸಾಯಿ ಟ್ರಸ್ಟ್‌ ಹಾಗೂ ಸತ್ಯ ಸಾಯಿ ಸೇವಾ ಸಂಘಟನೆಯ ಆಶ್ರಯದಲ್ಲಿ ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯಲ್ಲಿ ರೋಗಿಗಳ ಸಂಬಂಧಿಕರಿಗೆ ಮಧ್ಯಾಹ್ನದ ಊಟ ವಿತರಿಸುವ ‘ಸತ್ಯ ಸಾಯಿ ನಿತ್ಯ ನಾರಾಯಣ ಸೇವೆ’ಗೆ ಮಂಗಳವಾರ ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಚಾಲನೆ ನೀಡಿದರು.

‘ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ ಒಂದು ಸಾವಿರ ಮಂದಿಗೆ ಊಟ ವಿತರಿಸಲಾಗುತ್ತದೆ. ಪ್ರತಿದಿನ ಬೇರೆ ಬೇರೆ ಮೆನು ಇರುತ್ತದೆ. ಚಿತ್ರಾನ್ನ, ಪಲಾವ್‌, ಬಿಸಿಬೇಳೆ ಬಾತ್‌, ಪೊಂಗಲ್‌ ಹಾಗೂ ಮೊಸರನ್ನ ನೀಡಲಾಗುತ್ತದೆ. ತ್ಯಾಗರಾಜನಗರದಲ್ಲಿರುವ ಟ್ರಸ್ಟ್‌ನಿಂದಲೇ ಆಹಾರವನ್ನು ಪೂರೈಸಲಾಗುತ್ತದೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನಾಗೇಶ್‌ ಢಾಕಪ್ಪ ತಿಳಿಸಿದರು.

‘ಮುಂದಿನ ದಿನಗಳಲ್ಲಿ ಈ ಸೇವೆಯನ್ನು ವಿಕ್ಟೋರಿಯಾ ಆಸ್ಪತ್ರೆಗೂ ವಿಸ್ತರಿಸುವ ಉದ್ದೇಶವಿದೆ’ ಎಂದು ಹೇಳಿದರು.

ADVERTISEMENT

‘ಸಾಯಿ ಟ್ರಸ್ಟ್‌ನವರು ನಿತ್ಯ ನಾರಾಯಣ ಸೇವೆಯನ್ನು ಒಂದೊಂದು ಆಸ್ಪತ್ರೆಯಲ್ಲಿ ಒಂದೊಂದು ದಿನ ಮಾಡುವುದಾಗಿ ಹೇಳಿದ್ದರು. ಕಿದ್ವಾಯಿ ಆಸ್ಪತ್ರೆಗೆ ದೂರದ ಊರುಗಳಿಂದ ಕ್ಯಾನ್ಸರ್‌ ರೋಗಿಗಳು ಬರುತ್ತಾರೆ. ಇಲ್ಲಿಗೆ ಬರುವ ಬಹುತೇಕರು ಬಡವರು. ಅವರಿಗೆ ಊಟ ನೀಡುವುದು ಸೂಕ್ತ ಎಂದು ಸಲಹೆ ನೀಡಿದ್ದೆ’ ಎಂದು ರಮೇಶ್‌ ಕುಮಾರ್‌ ತಿಳಿಸಿದರು.

‘ಕ್ಯಾನ್ಸರ್‌ ರೋಗಿಗಳು ಎಲ್ಲ ಆಸೆಯನ್ನು ಬಿಟ್ಟು ಭಯದ ಛಾಯೆಯಲ್ಲೇ ಇಲ್ಲಿಗೆ ಬರುತ್ತಾರೆ. ಅವರಿಗೆ ಕರುಣೆ ತೋರಿಸಿದರೆ ಅರ್ಧ ರೋಗ ವಾಸಿಯಾಗುತ್ತದೆ. ನಿಷ್ಕರುಣಿಗಳಾಗಿ ದುಡ್ಡು ಮಾಡುವವರು ಸಮಾಜದಲ್ಲಿ ಸಾಕಷ್ಟು ಮಂದಿ ಸಿಗುತ್ತಾರೆ. ಆದರೆ, ಕರುಣಾಮಯಿಗಳು ಸಿಗುವುದು ವಿರಳ’ ಎಂದರು.

ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ, ‘ವಿವಿಧ ಸಂಸ್ಥೆಗಳು ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ₹136 ಕೋಟಿಯನ್ನು ಆಸ್ಪತ್ರೆಗೆ ನೀಡಿವೆ. ಇನ್ಫೊಸಿಸ್‌ ಪ್ರತಿಷ್ಠಾನವು ₹86 ಕೋಟಿ ವೆಚ್ಚದಲ್ಲಿ ಧರ್ಮಶಾಲೆಯನ್ನು ಕಟ್ಟಿಸಿಕೊಡುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.