ADVERTISEMENT

ಕಿದ್ವಾಯಿ ಸಿಬ್ಬಂದಿ ಪ್ರತಿಭಟನೆ 8ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:30 IST
Last Updated 20 ಮಾರ್ಚ್ 2018, 19:30 IST

ಬೆಂಗಳೂರು: ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿಯರು ಹಾಗೂ ಪ್ರಯೋಗಾಲಯ ತಂತ್ರಜ್ಞರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯು ಮಂಗಳವಾರವೂ ಮುಂದುವರಿಯಿತು. 175 ನರ್ಸ್‌ಗಳು ಮತ್ತು 25 ಮಂದಿ ಪ್ರಯೋಗಾಲಯ ತಂತ್ರಜ್ಞರು 8 ದಿನಗಳಿಂದ ಕೆಲಸಕ್ಕೆ ಗೈರು ಹಾಜರಾಗಿ, ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

‘ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಿ.ಮಂಜುಳಾ ಅವರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದೆವು. ಆದರೆ, ಅವರು ಸರಿಯಾದ ಮಾರ್ಗದಲ್ಲಿ ಅರ್ಜಿ ಸಲ್ಲಿಸಿ ನೇಮಕವಾಗಬೇಕು. ಇದೇ ರೀತಿ ಪ್ರತಿಭಟನೆ ಮುಂದುವರಿಸಿದರೆ ಕೆಲಸದಿಂದಲೇ ವಜಾಗೊಳಿಸುವು
ದಾಗಿ ತಿಳಿಸಿದರು’ ಎಂದು ಪ್ರತಿಭಟನಾನಿರತ ಶುಶ್ರೂಷಕ ಲಿಂಗಪ್ಪ ಅಳಲು ತೋಡಿಕೊಂಡರು.

‘ಕಿದ್ವಾಯಿ ಆಸ್ಪತ್ರೆಯಲ್ಲಿ 1999ರ ಬಳಿಕ ಯಾವುದೇ ನೇಮಕಾತಿ ನಡೆದಿಲ್ಲ. ಈಗಾಗಲೇ 7 ವರ್ಷ ಸೇವೆ ಸಲ್ಲಿಸಿದ್ದೇವೆ.  ನಮ್ಮ ಸೇವೆಯನ್ನು ಕಾಯಂಗೊ
ಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ತರಬೇತಿ ಶುಶ್ರೂಷಕರು, ಮತ್ತು ತರಬೇತಿ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಅವರ ಅರ್ಹತೆ ಪರಿಶೀಲಿಸದೇ ಈ ಹಿಂದೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ‌ಗುಣಾತ್ಮಕ ಚಿಕಿತ್ಸೆ ನೀಡಲು ಅವಶ್ಯವಿರುವ ತಾಂತ್ರಿಕ ಕೌಶಲ ಈ ಸಿಬ್ಬಂದಿಗೆ ಇಲ್ಲ. ಅಲ್ಲದೆ, ವೃಂದ ಮತ್ತು ನೇಮಕಾತಿ ನಿಯಮದಡಿ ನೇಮಕವಾಗಿಲ್ಲ. ಶುಶ್ರೂಷಕ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಅರ್ಹತೆ ಪರಿಶೀಲಿಸಿ, ರಾಜ್ಯ ಅರೆ ವೈದ್ಯಕೀಯ ಮಂಡಳಿಯಿಂದ ತಾತ್ಕಾಲಿಕ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಆಸ್ಪತ್ರೆ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ ಪ್ರತಿಕ್ರಿಯಿಸಿದರು.

‘150 ತರಬೇತಿ ಶುಶ್ರೂಷಕರು ಮತ್ತು 34 ತರಬೇತಿ ತಂತ್ರಜ್ಞರ ಸೇವೆ ಪಡೆಯಲು ಮಾರ್ಚ್‌ 9ರಂದು ಅಧಿಸೂಚನೆ ಹೊರಡಿಸಲಾಗಿದೆ. ಆಸ್ಪತ್ರೆ ಎದುರು ಗುಂಪು ಕಟ್ಟಿಕೊಂಡು ಪ್ರತಿಭಟನೆ ನಡೆಸುವುದನ್ನು ಬಿಟ್ಟು, ಪ್ಯಾರಾ ಮೆಡಿಕಲ್ ಬೋರ್ಡ್‌ ಮೂಲಕ ಅರ್ಜಿ ಸಲ್ಲಿಸಲು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಯೂ ಪ್ರತಿಭಟನಾಕಾರರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.