ADVERTISEMENT

ಕಿಮ್ಸ್‌: 125 ಶುಶ್ರೂಷಕರ ವಜಾ

ಕೆಲಸ ಕಾಯಂಗೊಳಿಸಲು ಪ್ರತಿಭಟನೆ ಮುಂದುವರಿಸಿದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 19:57 IST
Last Updated 9 ಅಕ್ಟೋಬರ್ 2015, 19:57 IST

ಬೆಂಗಳೂರು: ಸೇವೆ ಕಾಯಂ ಮತ್ತು ವೇತನ ಹೆಚ್ಚಳಕ್ಕೆ ಆಗ್ರಹಿಸಿ 19 ದಿನದಿಂದ ಧರಣಿ ನಡೆಸುತ್ತಿದ್ದ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್‌) 125 ಶುಶ್ರೂಷಕರನ್ನು, ಸಂಸ್ಥೆಯ ಆಡಳಿತ ಮಂಡಳಿ ವಜಾಗೊಳಿಸಿದೆ.

ಅಕ್ಟೋಬರ್ 8ರಂದು ನಡೆದ ಸಂಸ್ಥೆಯ ಆಡಳಿತ ಮಂಡಳಿ ಒಕ್ಕಲಿಗರ ಸಂಘದ  ಕಾರ್ಯಕಾರಿ ಸಮಿತಿಯಲ್ಲಿ 2010ರಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರನ್ನು ವಜಾಗೊಳಿಸಲಾಗಿದ್ದು, ಅದರ ಪ್ರತಿಯನ್ನು ಶುಕ್ರವಾರ ಕಚೇರಿ ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗಿದೆ.

ಬೇರೆ ದಾರಿ ಇರಲಿಲ್ಲ: ‘ಧರಣಿ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಲು ಹಲವು ಬಾರಿ ಅವಕಾಶ ಕೊಟ್ಟರೂ, ಶುಶ್ರೂಷಕರು ನಮ್ಮ ಮಾತು ಕೇಳಲಿಲ್ಲ. ಇದು ಖಾಸಗಿ ಸಂಸ್ಥೆ ಎಂಬುದನ್ನು ಮರೆತು ಧರಣಿ ಮುಂದುವರೆಸಿದರು. ಅವರನ್ನು ಸೇವೆಯಿಂದ ವಜಾಗೊಳಿಸದೆ ಬೇರೆ ದಾರಿಯೇ ಇರಲಿಲ್ಲ’ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಿಮ್ಸ್‌ 700 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಆಸ್ಪತ್ರೆಗೆ ಆಗಿದ್ದು, 350 ಸಿಬ್ಬಂದಿ ಮಾತ್ರ ಸಾಕು. ಒಟ್ಟು 184 ಶುಶ್ರೂಷಕರ ಪೈಕಿ, ಧರಣಿ ನಡೆಸುತ್ತಿದ್ದ 129 ಮಂದಿಯನ್ನು ಮಾತ್ರ ವಜಾಗೊಳಿಸಲಾದೆ. ಉಳಿದ 54 ಮಂದಿ ಧರಣಿಯಲ್ಲಿ ಪಾಲ್ಗೊಳ್ಳದೆ ಕರ್ತವ್ಯ ನಿರ್ವಹಿಸುತ್ತಿದ್ದರು.  ಹಾಗಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಈ ನಿರ್ಧಾರದಿಂದಾಗಿ ಆಸ್ಪತ್ರೆಗೆ ಸಿಬ್ಬಂದಿಯ ಕೊರತೆ ಎದುರಾಗದು’ ಎಂದು ಹೇಳಿದರು.

ಆಕ್ರೋಶ: ಸೇವೆಯಿಂದ ವಜಾಗೊಳಿಸಿರುವ ವಿಷಯ ತಿಳಿಯುತ್ತಿದ್ದಂತೆ, ಧರಣಿನಿರತರು ಒಕ್ಕಲಿಗರ ಸಂಘ ಮತ್ತು ಅದರ ಅಧ್ಯಕ್ಷ ಅಪ್ಪಾಜಿಗೌಡರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ವಜಾ ಆದೇಶ ಕಾರ್ಯಕಾರಿ ಮಂಡಳಿಯ ಒಮ್ಮತದ ನಿರ್ಧಾರವಲ್ಲ. ಬದಲಿಗೆ ನಾವು ಧರಣಿ ಹಿಂಪಡೆಯಲು ಮಾಡಿರುವ ಬೆದರಿಕೆ ತಂತ್ರ. ನಮ್ಮ ಬೇಡಿಕೆ ಈಡೇರುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ. ಕುಟುಂಬ ಸಮೇತ ಅಹೋರಾತ್ರಿ ಧರಣಿ ಮುಂದುವರೆಸುತ್ತೇವೆ’ ಎಂದು ಶುಶ್ರೂಷಕರೊಬ್ಬರು ತಿಳಿಸಿದರು.

‘ನಾಲ್ಕೈದು ವರ್ಷಗಳ ಹಿಂದೆ ನಮ್ಮನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ಹಿಂದಿನ ಆಡಳಿತ ಸಂಸ್ಥೆ, ಮೂರು ವರ್ಷದ ನಂತರ ಕಾಯಂಗೊಳಿಸುವುದಾಗಿ ಭರವಸೆ ನೀಡಿತ್ತು. ನಂತರ ಅಸ್ತಿತ್ವಕ್ಕೆ ಬಂದ ಆಡಳಿತ ಮಂಡಳಿ ಆರಂಭದಲ್ಲಿ ಭರವಸೆ ನೀಡಿ, ಈಗ ಇಂತಹ ಕಠಿಣ ನಿರ್ಧಾರದ ಮೂಲಕ ಬೆದರಿಸಲು ಮುಂದಾಗಿದೆ’  ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.