ADVERTISEMENT

ಕಿರುತೆರೆ ಕಲಾವಿದನ ಮನೆಯಲ್ಲಿ ದರೋಡೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:52 IST
Last Updated 9 ಡಿಸೆಂಬರ್ 2013, 19:52 IST

ಬೆಂಗಳೂರು: ನಾಗರಬಾವಿ ಎರಡನೇ ಹಂತದ ವಿನಾಯಕ ಲೇಔಟ್‌ನಲ್ಲಿರುವ ಕಿರುತೆರೆ ಕಲಾವಿದ ಹರ್ಷ ಎಂಬುವರ ಮನೆಗೆ ಭಾನುವಾರ ರಾತ್ರಿ ನುಗ್ಗಿದ ದುಷ್ಕರ್ಮಿಗಳು ಸುಮಾರು ರೂ 15 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಹಣ ದರೋಡೆ ಮಾಡಿದ್ದಾರೆ.

ಹರ್ಷ, ಅವರ ತಂದೆ ಪ್ರಕಾಶ್‌, ತಾಯಿ ವಿಮಲಾ ಮತ್ತು ಅತ್ತೆಯ ಮಗಳಾದ ಸ್ವಾತಿ ಅವರು ರಾತ್ರಿ 10 ಗಂಟೆ ಸುಮಾರಿಗೆ ಮನೆಯ ಬಾಗಿಲನ್ನು ತೆರೆದಿಟ್ಟು ಒಳ ಭಾಗದಲ್ಲಿ ಊಟ ಮಾಡುತ್ತಾ ಕುಳಿತಿದ್ದರು.

ಈ ವೇಳೆ ಏಕಾಏಕಿ ಒಳಗೆ ನುಗ್ಗಿದ ನಾಲ್ಕೈದು ಮಂದಿ ದರೋಡೆಕೋರರು ಮಾರಕಾಸ್ತ್ರಗಳಿಂದ ಹರ್ಷ ಮತ್ತು ಕುಟುಂಬ ಸದಸ್ಯರನ್ನು ಬೆದರಿಸಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ನಂತರ ಅಲ್ಮೇರಾದ ಕೀ ಕಿತ್ತು­ಕೊಂಡು ಅದರಲ್ಲಿದ್ದ ರೂ 2 ಲಕ್ಷ ನಗದು ಹಾಗೂ ಆಭರಣ­ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡಿದ್ದ ದುಷ್ಕರ್ಮಿಗಳು ಕನ್ನಡದಲ್ಲಿ ಮಾತನಾಡುತ್ತಿದ್ದರು. ಅವರು ಮನೆಯಿಂದ ಹೊರ ಹೋದ ಸ್ವಲ್ಪ ಸಮಯದ ಬಳಿಕ ಕೊಠಡಿಯ ಬಾಗಿಲು ಮುರಿದು ಹೊರಬಂದು ತಾಯಿಯ ಮೊಬೈಲ್‌ನಿಂದ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆಯ ಮಾಹಿತಿ ನೀಡಿದೆ’ ಎಂದು ಹರ್ಷ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಯಿಯ ತಾಳಿ ಮತ್ತು ಸ್ವಾತಿಯ ಚಿನ್ನದ ಸರವನ್ನೂ ದರೋಡೆಕೋರರು ಕಿತ್ತುಕೊಂಡಿದ್ದರು. ಆದರೆ, ತಾಯಿ ಪರಿಪರಿಯಾಗಿ ಮನವಿ ಮಾಡಿದ್ದರಿಂದ ತಾಳಿ ಮತ್ತು ಸರವನ್ನು ವಾಪಸ್‌ ಕೊಟ್ಟರು’ ಎಂದು ಹೇಳಿದರು.

ಹರ್ಷ ಅವರು ‘ಮೊಗ್ಗಿನ ಮನಸು’, ‘ಕೃಷ್ಣನ್‌ ಲವ್‌ ಸ್ಟೋರಿ’, ‘ರಾಜಾಹುಲಿ’ ಚಿತ್ರಗಳಲ್ಲಿ ಸಹ ನಟನಾಗಿ ಅಭಿ­ನಯಿಸಿದ್ದಾರೆ. ಅಲ್ಲದೇ, ಕಿರುತೆರೆ ಧಾರಾ­ವಾಹಿ­ಗಳಲ್ಲಿ ನಟಿಸಿದ್ದಾರೆ.

ಘಟನೆ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.