ADVERTISEMENT

ಕುಗ್ಗಿದ ಬಿಬಿಎಂಪಿ ಉತ್ಸಾಹ, ಹೆಚ್ಚಿದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST
ಕುಗ್ಗಿದ ಬಿಬಿಎಂಪಿ ಉತ್ಸಾಹ, ಹೆಚ್ಚಿದ ಸಮಸ್ಯೆ
ಕುಗ್ಗಿದ ಬಿಬಿಎಂಪಿ ಉತ್ಸಾಹ, ಹೆಚ್ಚಿದ ಸಮಸ್ಯೆ   

ಬೆಂಗಳೂರು: ನಗರದ ತ್ಯಾಜ್ಯದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತ್ಯಾಜ್ಯ ವಿಂಗಡಣೆ ಅಭಿಯಾನಕ್ಕೆ ಚಾಲನೆ ನೀಡಿದ ಆರಂಭದ ದಿನಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೋರುತ್ತಿದ್ದ ಉತ್ಸಾಹ ಈಗ ಕಡಿಮೆಯಾಗಿದೆ. ಪರಿಣಾಮ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ.

ನಗರದಲ್ಲಿ ಪ್ರತಿದಿನ ಉತ್ಪಾದನೆಯಾಗುವ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದೇ ಎಲ್ಲೆಂದರಲ್ಲಿ ಕಸದ ರಾಶಿಗಳು ನಿರ್ಮಾಣವಾಗುತ್ತಿವೆ. ನಗರದ ಬಡಾವಣೆಗಳ ರಸ್ತೆಗಳ ಪಕ್ಕ, ಪಾದಚಾರಿ ಮಾರ್ಗಗಳು, ಖಾಲಿ ನಿವೇಶನಗಳು ಕಸ ತುಂಬಿಕೊಳ್ಳುತ್ತಿವೆ.

`ಮನೆ ಮನೆಗಳಿಂದ ಕಸ ಸಂಗ್ರಹ  ಸಂಪೂರ್ಣವಾಗಿ ಬಂದ್ ಆಗಿದೆ. ಪ್ರತಿದಿನ ಹಸಿತ್ಯಾಜ್ಯ ಸಂಗ್ರಹ ಮಾಡಲಾಗುವುದು ಹಾಗೂ ವಾರಕ್ಕೊಮ್ಮೆ ಒಣತ್ಯಾಜ್ಯ ಸಂಗ್ರಹ ಮಾಡುವುದಾಗಿ ತಿಳಿಸಿದ್ದ ಬಿಬಿಎಂಪಿ ಈಗ ಯಾವ ಕಸವನ್ನೂ ತೆಗೆದುಕೊಳ್ಳುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕಸವನ್ನು ಸುರಿಯುವುದಾದರೂ ಎಲ್ಲಿ~ ಎಂದು ಪ್ರಶ್ನಿಸಿದವರು ಮರಿಯಪ್ಪನಪಾಳ್ಯದ ನಿವಾಸಿ ರಾಜೀವ್.

`ಕಸ ವಿಂಗಡಣೆ ಕಡೆಗೆ ಮಾತ್ರ ಬಿಬಿಎಂಪಿ ಗಮನ ಕೊಟ್ಟು, ನಗರದಿಂದ ವಿಲೇವಾರಿಯಾಗಬೇಕಾದ ಮಿಶ್ರಿತ ತ್ಯಾಜ್ಯದ ಕಡೆಗೆ ಹೆಚ್ಚು ಗಮನ ನೀಡುತ್ತಿಲ್ಲ. ಹೀಗಾಗಿ ಹೆಚ್ಚಿನ ಕಸ ನಗರದಲ್ಲೇ ಉಳಿಯುತ್ತಿದೆ. ಕಸ ವಿಂಗಡಣೆಯ ಜತೆಗೆ ಮಿಶ್ರಿತ ತ್ಯಾಜ್ಯದ ವಿಲೇವಾರಿ ಬಗ್ಗೆಯೂ ಹೆಚ್ಚು ಮಹತ್ವ ನೀಡಬೇಕು~ ಎಂದು ಅವರು ಒತ್ತಾಯಿಸಿದರು.

ಮಂಡೂರಿನಲ್ಲಿ ಮತ್ತೆ ವಿರೋಧ: ನಗರದ ಕಸವನ್ನು ಮಂಡೂರಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ಸುರಿಯಲು ಸ್ಥಳೀಯರು ಶನಿವಾರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ತ್ಯಾಜ್ಯ ಹೊತ್ತ ಲಾರಿಗಳು ಶನಿವಾರ ಹಾಗೂ ಭಾನುವಾರ ನಗರದಲ್ಲೇ ಉಳಿದಿವೆ. ಇದು ನಗರದ ತ್ಯಾಜ್ಯದ ಸಮಸ್ಯೆ ಮತ್ತೆ ಹೆಚ್ಚಾಗುವಂತೆ ಮಾಡಿದೆ.

`ಮಂಡೂರಿನಲ್ಲಿ ಕಸ ಸುರಿಯಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ನಗರದ ಕಸದ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಕಸ ಸುರಿಯಲು ಪಾಲಿಕೆ ಗುರುತಿಸಿದ್ದ ಜಾಗವನ್ನು ರಾಜ್ಯ ಸರ್ಕಾರ ಇದುವರೆಗೂ ಬಿಟ್ಟುಕೊಟ್ಟಿಲ್ಲ. ಇದರಿಂದ ಕಸ ವಿಲೇವಾರಿ ಪಾಲಿಕೆಗೆ ತಲೆನೋವಾಗುತ್ತಿದೆ~ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್.ನಾಗರಾಜ್ ತಿಳಿಸಿದ್ದಾರೆ.

`ಮಂಡೂರಿನ ಸ್ಥಳೀಯರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಸ್ಥಳೀಯರು ಕಸ ಸುರಿಯಲು ಒಪ್ಪದೇ ಹೋದರೆ ಸೋಮವಾರದಿಂದ ನಗರದ ಕಸದ ಸಮಸ್ಯೆ ಇನ್ನಷ್ಟು ಜಟಿಲವಾಗಲಿದೆ~ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಸ ಎತ್ತಿಸಲು ಕ್ರಮ
`ನಗರದ ರಸ್ತೆಗಳಲ್ಲಿ ಕಸ ಬೀಳುವುದನ್ನು ತಪ್ಪಿಸಲು ಸಮರ್ಪಕ ಕಸ ಸಂಗ್ರಹದ ವ್ಯವಸ್ಥೆ ಮಾಡಲಾಗಿದೆ. ಆದರೂ ಕೆಲವು ಕಡೆ ರಸ್ತೆಗಳಲ್ಲೇ ಕಸ ಸುರಿಯುವುದು ಮುಂದುವರಿದಿದೆ. ಕಸ ರಾಶಿ ಬಿದ್ದಿರುವ ಕಡೆಗಳಲ್ಲಿ ಶೀಘ್ರವೇ ಎತ್ತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ನಗರದ ಕಸ ನಿರ್ವಹಣೆಗೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು. ಮಂಡೂರಿಗೆ ಕಸ ಸುರಿಯಲು ವಿರೋಧ ವ್ಯಕ್ತವಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ~
-ರಜನೀಶ್ ಗೋಯಲ್, ಆಯುಕ್ತರು, ಬಿಬಿಎಂಪಿ

ಇಚ್ಛಾಶಕ್ತಿಯ ಕೊರತೆ
`ನಗರದ ತ್ಯಾಜ್ಯ ನಿರ್ವಹಣೆಯ ಬಗ್ಗೆ ಪಾಲಿಕೆಯ ಆಡಳಿತ ಸರಿಯಾಗಿ ಗಮನ ನೀಡುತ್ತಿಲ್ಲ. ಕಸ ವಿಂಗಡಣೆಯ ಆರಂಭಶೂರತ್ವ ತೋರಿದ ಪಾಲಿಕೆಯ ಆಡಳಿತ ಈಗ ರಸ್ತೆಗಳಲ್ಲಿ ಕಸ ರಾಶಿ ಬಿದ್ದರೂ ಕಣ್ಮುಚ್ಚಿ ಕುಳಿತಿದೆ.

ತಮ್ಮದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಭೂಮಿ ಮಂಜೂರು ಮಾಡಿಸಿಕೊಂಡು ಕಸ ವಿಲೇವಾರಿ ಮಾಡಲು ಪಾಲಿಕೆಯ ಆಡಳಿತ ವಿಫಲವಾಗಿದೆ. ಕಸದ ಸಮಸ್ಯೆ ಮಿತಿ ಮೀರುತ್ತಿರುವ ಸಂದರ್ಭದಲ್ಲಿ ಮೇಯರ್ ವಿದೇಶ ಪ್ರಯಾಣ ಹೊರಟಿದ್ದಾರೆ. ಆಡಳಿತ ಪಕ್ಷದ ಇಚ್ಛಾಶಕ್ತಿಯ ಕೊರತೆ ಕಸದ ಸಮಸ್ಯೆ ಬಿಗಡಾಯಿಸಲು ಕಾರಣ~
-ಎಂ.ಕೆ. ಗುಣಶೇಖರ್,ವಿರೋಧ ಪಕ್ಷದ ನಾಯಕ, ಬಿಬಿಎಂಪಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.