ADVERTISEMENT

ಕುಚೇಷ್ಟೆ ಪ್ರಶ್ನೆಗಳಿಗೆ ಉತ್ತರಿಸಲಾರೆ: ರಾಜ್ಯಪಾಲ ಭಾರದ್ವಾಜ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಬೆಂಗಳೂರು: `ಕುಚೋದ್ಯ ವ್ಯಕ್ತಿಗಳು ಎತ್ತುವಂತಹ ಕುಚೇಷ್ಟೆ ಪ್ರಶ್ನೆಗಳಿಗೆಲ್ಲಾ ನಾನು ಉತ್ತರಿಸುವ ಅಗತ್ಯವಿಲ್ಲ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಬುಧವಾರ ಇಲ್ಲಿ ಸಂಸದ ಡಿ.ಬಿ. ಚಂದ್ರೇಗೌಡ ವಿರುದ್ಧ ಹರಿಹಾಯ್ದರು.

ಓಟಿಗಾಗಿ ನೋಟು ಹಗರಣದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಯಾದವ್ ವಿರುದ್ಧ ಸಿಬಿಐ ತನಿಖೆ ಕೈಬಿಡುವಲ್ಲಿ ಶಾಮೀಲಾಗಿರುವ ಆರೋಪದ ಮೇಲೆ ತಮ್ಮ ವಿರುದ್ಧ ನವದೆಹಲಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಡಿ.ಬಿ. ಚಂದ್ರೇಗೌಡ ತಮ್ಮ ರಾಜೀನಾಮೆಗೆ ಒತ್ತಾಯಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ರಾಜ್ಯಪಾಲರು ಮೇಲಿನಂತೆ ಪ್ರತಿಕ್ರಿಯಿಸಿದರು.
`ಡಿ.ಬಿ. ಚಂದ್ರೇಗೌಡರೇನು ಬಿಜೆಪಿಯ ಹಿರಿಯ ನಾಯಕರೇನಲ್ಲ. ಅವರೊಬ್ಬ ಪಕ್ಷಾಂತರಿ~ ಎಂದು ರಾಜ್ಯಪಾಲರು ತಿರುಗೇಟು ನೀಡಿದರು.

ಮುಲಾಯಂ ಸಿಂಗ್ ವಿರುದ್ಧ ಸಿಬಿಐ ತನಿಖೆ ಕೈಬಿಡುವಲ್ಲಿ ತಾವು ಶಾಮೀಲಾಗಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, `ನೀವು ಈ ಪ್ರಶ್ನೆಯನ್ನು ಮುಲಾಯಂಸಿಂಗ್ ಯಾದವ್ ಅವರನ್ನೇ ಕೇಳಿದರೆ ಸೂಕ್ತ~ ಎಂದು ಪತ್ರಕರ್ತರನ್ನೇ ಕೇಳಿದರು.

`ನವದೆಹಲಿಯ ತಿಲಕ್‌ಠಾಣೆಯಲ್ಲಿ ತಮ್ಮ ವಿರುದ್ಧ ದೂರು ನೀಡಿರುವ ವ್ಯಕ್ತಿಯ ಬಗ್ಗೆ ನನಗೇನೂ ಅಷ್ಟು ತಿಳಿದಿಲ್ಲ. ಇವೆಲ್ಲಾ ಕುಚೋದ್ಯದ ಕೆಲಸ~ ಎಂದು ರಾಜ್ಯಪಾಲರು ಹೇಳಿದರು.

`ನನ್ನ 28 ವರ್ಷಗಳ ಸಂಸತ್ತಿನ ಅನುಭವದಲ್ಲಿ ಬಿಜೆಪಿ, ಸಿಪಿಐ(ಎಂ), ಆರ್‌ಜೆಡಿ, ಎಸ್‌ಪಿ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರ ಜತೆ ಸುಮಧುರ ಬಾಂಧವ್ಯ ಹೊಂದಿದ್ದೆ. ಆಗ ಯಾರು ಕೂಡ ನನ್ನ ವಿರುದ್ಧ ದೂರು ದಾಖಲಿಸಲಿಲ್ಲ. ನಾನು ಕರ್ನಾಟಕಕ್ಕೆ ಬಂದ ಎರಡು ವರ್ಷಗಳ ನಂತರ ಇಂತಹ ಕುಚೇಷ್ಟೆ ಕೆಲಸಗಳು ಪ್ರಾರಂಭವಾಗಿವೆ~ ಎಂದು ರಾಜ್ಯಪಾಲರು ಪ್ರತಿಕ್ರಿಯಿಸಿದರು. ಕೆಲವರನ್ನು ಜೈಲಿಗೆ ಕಳಿಸುವ ಉದ್ದೇಶವಿಟ್ಟುಕೊಂಡವರಂತೆ ರಾಜ್ಯಪಾಲರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಚಂದ್ರೇಗೌಡರ ಆರೋಪದ ಬಗ್ಗೆ, `ನಾನು ಹೇಗೆ ನ್ಯಾಯಾಲಯದ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯ ನೀವೇ ಹೇಳಿ?~ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.